ತಿರುವನಂತಪುರಂ, ಆ 31(DaijiworldNews/HR): ತಿರುವನಂತಪುರಂನ ವೆಂಜರಮೂಡು ಎಂಬಲ್ಲಿ ಇಬ್ಬರು ಸಿಪಿಐ(ಎಂ) ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ, ಕೆಎಲ್ 21 ಕೆ 4201 ಎಂಬ ನೋಂದಣಿ ಸಂಖ್ಯೆ ಹೊಂದಿರುವ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಮಧ್ಯರಾತ್ರಿ ವೇಂಬಯಂ ಮೂಲದ ಮಿಥಿಲಾಜ್ (32), ಹಕ್ ಮುಹಮ್ಮದ್ (25) ಬೈಕ್ನಲ್ಲಿ ಹೋಗುತ್ತಿದ್ದ ವೇಳೆ 5 ಜನರ ಗುಂಪು ಇವರನ್ನು ತಡೆದು ನಿಲ್ಲಿಸಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇಬ್ಬರು ಸಿಪಿಐ(ಎಂ) ಕಾರ್ಯಕರ್ತರೊಂದಿಗಿದ್ದ ಶಾಹಿನ್ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಹತ್ಯೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ರಾಜಕೀಯ ಸೇಡು ಹತ್ಯೆಗಳಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದ್ದು, ಈ ಕೊಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಈ ಹಿಂದೆ ಎರಡು ಪಕ್ಷಗಳ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿತ್ತು. ಮೇ ತಿಂಗಳಲ್ಲಿ ದಾಳಿ ವರದಿಯಾಗಿದೆ ಮತ್ತು ಈ ದಾಳಿಯ ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನಕ್ಕೊಳಗಾದ ಮೂವರು ಆರೋಪಿಗಳಲ್ಲಿ ಓರ್ವ ಬೈಕ್ನ ಮಾಲೀಕ. ಪೊಲೀಸರು ಸಾಕ್ಷಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ದಾಳಿಕೋರರು ಎರಡು ಬೈಕ್ಗಳಲ್ಲಿ ಅಪರಾಧ ಸ್ಥಳಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಇದು ಯೋಜಿತ ಕೊಲೆ ಎಂದು ಹೇಳಿರುವ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಎ. ರಹೀಮ್ ಅವರು ಕಾಂಗ್ರೆಸ್ ನಾಯಕರಿಗೆ ಈ ಹತ್ಯೆಯ ಬಗ್ಗೆ ತಿಳಿದಿದೆ ಎಂದು ಆರೋಪಿಸಿದ್ದಾರೆ.