ನವದೆಹಲಿ, ಆ 31(DaijiworldNews/HR): ತನ್ನ ಮಕ್ಕಳ ಹೆಸರಿಗೆ ಸುಮಾರು 40 ದಶಲಕ್ಷ ಅಮೆರಿಕ ಡಾಲರ್ ವರ್ಗಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆಯ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿದ್ದು, ಕಳೆದ ವಾರ ವಾದ-ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿತ್ತು.
ಇನ್ನು ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ 2017ರ ಮೇ ತಿಂಗಳಲ್ಲಿ ನೀಡಿತ್ತು. ವಿಜಯ್ ಮಲ್ಯ ಅವರು ಕಿಂಗ್ ಫಿಶರ್ ಏರ್ಲೈನ್ಸ್ ಮೂಲಕ 9,000 ಕೋಟಿ ರೂಪಾಯಿಗೂ ಅಧಿಕ ಬ್ಯಾಂಕ್ ಸಾಲ ಪಡೆದುಕೊಂಡಿದ್ದರು. ಬಳಿಕ ಕಿಂಗ್ ಫಿಶರ್ ನಷ್ಟ ಅನುಭವಿಸಿದೆ ಎಂದು ಮುಂದಿಟ್ಟ ಮಲ್ಯ ಸಾಲ ಮರುಪಾವತಿಸಲು ಹಿಂದೇಟು ಹಾಕಿ ಇಂಗ್ಲೆಂಡ್ನಲ್ಲಿ ತಲೆಮರೆಸಿಕೊಂಡಿದ್ದಾರೆ.