ಬೆಂಗಳೂರು, ಆ. 31 (DaijiworldNews/MB) : ಕೊರೊನಾ ವೈರಸ್ ಸೋಂಕು ಚೇತರಿಕೆ ಪ್ರಮಾಣದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.
ಅನಂತ್ ಕುಮಾರ್ ಫೌಂಡೇಶನ್ ಆಯೋಜಿಸಿದ್ದ ವೆಬಿನಾರ್ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿಧಾನವಾಗಿಯಾದರೂ ಕೊರೊನಾ ಸೋಂಕು ಚೇತರಿಸಿ ಪ್ರಮಾಣ ಹೆಚ್ಚಿದೆ. ಜನರಲ್ಲಿ ಸಹ ಸೋಂಕಿನ ಬಗ್ಗೆ ಜಾಗೃತಿ ಮೂಡಿದೆ. "ಕರೋನವೈರಸ್ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ ಮುಂಚೂಣಿಯಲ್ಲಿರುವ ರಾಜ್ಯವಾಗಿ ಕರ್ನಾಟಕ ರಾಜ್ಯವು ಹೊರಹೊಮ್ಮಿದೆ. ನಾಗರಿಕರ ಜೀವನವು ಸಹಜ ಸ್ಥಿತಿಗೆ ವೇಗವಾಗಿ ಮರಳುತ್ತಿದೆ. ದೇಶದಲ್ಲಿ, ಆರ್ಥಿಕವಾಗಿ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯವು ಅಗ್ರಸ್ಥಾನದಲ್ಲಿದೆ" ಎಂದು ಹೇಳಿದ್ದಾರೆ.
"ಮುಂಬರುವ ದಿನಗಳಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅನೇಕ ರಾಜ್ಯಗಳು ಸಂಪೂರ್ಣ ಗೊಂದಲದಲ್ಲಿವೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬನೆಯ ಪರಿಕಲ್ಪನೆಯಡಿಯಲ್ಲಿ ಕರ್ನಾಟಕವು ಮುಂದೆ ಸಾಗುತ್ತಿದೆ. ಈ ಮನೋಭಾವದಡಿಯಲ್ಲಿ, ಬೆರಳೆಣಿಕೆಯ ಚಟುವಟಿಕೆಗಳನ್ನು ಹೊರತುಪಡಿಸಿ, ನಾವು ಎಲ್ಲವನ್ನು ಆರಂಭಿಸಿದ್ದೇವೆ. ತೆರಿಗೆ ಸಂಗ್ರಹದಲ್ಲೂ ನಾವು ಉತ್ತಮ ಪ್ರಗತಿಯನ್ನು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಒಳಗಾದ ಕೈಗಾರಿಕಾ ವಲಯಕ್ಕೆ ಈಗ ಉತ್ತೇಜನ ನೀಡಲು ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ಸುಧಾರಣಾ ಕಾಯ್ದೆ ಮತ್ತು ಇತರ ಕಾನೂನುಗಳನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.