ಬೆಂಗಳೂರು, ಆ 31(DaijiworldNews/HR): ಚೀನಾ ಭಾರತದೊಂದಿಗೆ ಗಡಿ ವಿಚಾರದ ಸಂಬಂಧದಿಂದಾಗಿ ಹಲವು ಉದ್ಯಮಗಳ ಮೇಲೆ ಭಾರತ ಈಗಾಗಲೇ ನಿಷೇಧ ಹೇರಿದ್ದು, ಇದೀಗ ಕೇಂದ್ರ ಸರ್ಕಾರ ಚೀನಾದ ಎಲೆಕ್ಟ್ರಾನಿಕ್ಸ್ ಆಟಿಕೆಗಳ ಮೇಲೆ ಶೇಕಡಾ 60ರಷ್ಟು ಆಮದು ಸುಂಕ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಚಿಕ್ಕಮಕ್ಕಳು ಆಟವಾಡುವ ಆಟಿಕೆಗಳ ಮೇಲೆ ಶೇಕಡಾ 60ರಷ್ಟು ಆಮದು ಸುಂಕ ವಿಧಿಸಿದ್ದು, ಅಷ್ಟೆ ಅಲ್ಲದೇ ಭಾರತದ ಗುಣಮಟ್ಟ ಪ್ರಮಾಣಪತ್ರ ವಿಭಾಗದಿಂದ ಸೆಪ್ಟೆಂಬರ್ 1ರೊಳಗೆ ಕಡ್ಡಾಯವಾಗಿ ಸರ್ಟಿಫಿಕೇಟ್ ಪಡೆಯಬೇಕೆಂದು ಚೀನಾ ದೇಶದ ಆಟಿಕೆ ಕಂಪೆನಿಗಳ ಮೇಲೆ ಪರಿಣಾಮ ಬೀರಲಿದೆ.
ಬೆಂಗಳೂರು ನಗರದಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ಆಟಿಕೆ ಕಂಪೆನಿಗಳಿವೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕರ್ನಾಟಕ ಆಟಿಕೆಗಳ ಒಕ್ಕೂಟ ಅಧ್ಯಕ್ಷ ಮಂಗಲ್ ಚಂದ್ ಜೈನ್, ಭಾರತದ ಎಲೆಕ್ಟ್ರಾನಿಕ್ ಆಟಿಕೆಗಳ ಮಾರುಕಟ್ಟೆಯಲ್ಲಿ ಚೀನಾ ಕಂಪೆನಿಗಳ ಪಾರುಪತ್ಯವನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಚೀನಾದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಕೈಗೆಟಕುವ ದರಕ್ಕೆ ಸಿಗುವುದರಿಂದ ಇಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ನಮ್ಮಲ್ಲಿ ಒಂದೇ ಒಂದು ಎಲೆಕ್ಟ್ರಾನಿಕ್ಸ್ ಆಟಿಕೆ ಮಾರುಕಟ್ಟೆಯಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 1ರಿಂದ ಹೊರಡಿಸಿರುವ ಕ್ರಮ ಕಟ್ಟುನಿಟ್ಟಾಗಿದ್ದು ಬಿಐಎಸ್ ಮಾರ್ಕ್ ಇರುವ ಆಟಿಕೆಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಹೇಳಿದೆ. ಇದರಿಂದ ಚೀನಾ ಕಂಪೆನಿಗಳಿಗೆ ರಫ್ತು ವೆಚ್ಚ ದುಬಾರಿಯಾಗುತ್ತಿದ್ದು ನಿಧಾನವಾಗಿ ಅವುಗಳ ಪಾರುಪತ್ಯ ನಮ್ಮ ದೇಶದ ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತದೆ ಎಂದು ಜೈನ್ ವಿವರಿಸಿದ್ದಾರೆ.