ನವದೆಹಲಿ, ಆ 31(DaijiworldNews/HR): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಇಂದು ಅಧಿಸೂಚನೆ ಹೊರಡಿಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಎಲ್ಲಾ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.
ಈಗಾಗಲೇ ಮೇ 25ರಿಂದ ದೇಶಿಯ ವಿಮಾನ ಹಾರಾಟ ಆರಂಭವಾಗಿದೆ. ಆದರೆ ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಮುಂದುವರೆಸಲಾಗಿದೆ. ಈ ನಿರ್ಬಂಧವೂ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
ಇನ್ನು ವಂದೇ ಭಾರತ್ ಮಿಷನ್ ಅಡಿ ವಿಮಾನಗಳ ಹಾರಾಟಕ್ಕೆ ಅನುಮತಿ ಇದ್ದು, ಈ ವಿಮಾನದಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ.