ನವದೆಹಲಿ, ಆ 31(DaijiworldNews/HR): ಪೂರ್ವ ಲಡಾಖ್ನ ಪಾಂಗಾಂಗ್ ಸರೋವರದ ನೈಜ ನಿಯಂತ್ರಣ ರೇಖೆ ಬಳಿ ಯಥಾಸ್ಥಿತಿ ಬದಲಿಸಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯತ್ನಿಸಿರುವ ಬೆನ್ನಲೇ ಪ್ರಧಾನಿ ನರೇಂದ್ರ ಮೋದಿಯವರು ಚೀನಾಕ್ಕೆ ತಕ್ಕ ತಿರುಗೇಟು ನೀಡುವುದು ಯಾವಾಗ, ಗಡಿಯಲ್ಲಿನ ಸ್ಥಿತಿ ಕುರಿತು ಪ್ರಧಾನಿ ಮತ್ತು ರಕ್ಷಣಾ ಸಚಿವರು ಮಾಹಿತಿ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದ ಭೂಮಿ ಕಬಳಿಸುವ ಹೊಸ ಸಾಹಸ. ಪಾಂಗಾಂಗ್ ತ್ಸೊ ಸರೋವರ ಪ್ರದೇಶ, ಗೋಗ್ರಾ ಮತ್ತು ಗಾಲ್ವನ್ ಕಣಿವೆ, ದೇಪ್ಸಂಗ್ ಮೈದಾನ್, ಲಿಪುಲೇಖ್, ದೋಕ್ ಲಾ ಪಾಸ್ ಮತ್ತು ನಾಥು ಲಾ ಪಾಸ್ ಪ್ರದೇಶಗಳಲ್ಲಿ ಒಳನುಸುಳುವಿಕೆಯು ಚೀನಾದ ದೈನಂದಿನ ಚಟುವಟಿಕೆಯಾಗಿದೆ.. ತಾಯಿ ಭಾರತದ ರಕ್ಷಣಗೆಗಾಗಿ ಸೇನೆಯು ನಿರ್ಭೀತವಾಗಿ ನಿಂತಿದೆ. ಆದರೆ, ಚೀನಾ ಮೇಲೆ ಮೋದಿ ಜಿ ಅವರ ಕೆಂಗಣ್ಣು ಯಾವಾಗ ತೆರೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಭೂಮಿಯನ್ನು ಚೀನಾ ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ. ದೇಶದ ಸಾರ್ವಭೌಮತ್ವದ ಮೇಲೆ ದಾಳಿ ನಡೆಯುತ್ತಿದೆ. ಆದರೆ, ಮೋದಿ ಸರ್ಕಾರ ಎಲ್ಲಿದೆ? ಆಗಸ್ಟ್ 29-30ರಂದು ಚೀನಾ ಯೋಧರು ನಮ್ಮ ಭೂಮಿ ವಶಪಡಿಸಿಕೊಳ್ಳಲು ಪಯತ್ನಿಸಿದ್ದರು ಮತ್ತು ಭಾರತೀಯ ಯೋಧರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು ಎಂಬ ರಕ್ಷಣಾ ಸಚಿವಾಲಯದ ಪತ್ರಿಕಾ ಪ್ರಕಟಣೆ ಆಘಾತಕಾರಿ. ಈಗ ಇದು ಲಡಾಖ್ಗಷ್ಟೇ ಸೀಮಿತವಾಗಿಲ್ಲ. ಉತ್ತರಾಖಂಡದ ಲಿಪುಲೇಖ್ನಲ್ಲೂ ಇದೇ ಸ್ಥಿತಿಯಿದೆ' ಎಂದು ಸುರ್ಜೆವಾಲಾ ಹೇಳಿದ್ದಾರೆ.