ನವದೆಹಲಿ, ಆ. 31 (DaijiworldNews/MB) : ''ಈ ಹಿಂದೆಯೇ ನಾನು ಸುಪ್ರೀಂ ನೀಡಿದ ಶಿಕ್ಷೆ ಅನುಭವಿಸುವುದಾಗಿ ಹೇಳಿದ್ದೇನೆ. ಅದರಂತೆ ಈಗ ಸುಪ್ರೀಂ ತೀರ್ಪನ್ನು ಗೌರವಯುತವಾಗಿ ಒಪ್ಪಿ ಒಂದು ರೂಪಾಯಿ ದಂಡವನ್ನು ಪಾವತಿಸಲಾಗಿದೆ'' ಎಂದು ನ್ಯಾಯಾಂಗ ನಿಂದನೆ ಪ್ರಕರಣದ ಸುಪ್ರೀಂ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
''ಸುಪ್ರಿಂ ನನಗೆ ಒಂದು ರೂಪಾಯಿ ದಂಡ ವಿಧಿಸಿದೆ. ಇದನ್ನು ಪಾವತಿಸದಿದ್ದಲ್ಲಿ ಮೂರು ತಿಂಗಳ ಸೆರೆವಾಸ ಹಾಗೂ ಮೂರು ವರ್ಷಗಳ ಕಾಲ ವಕೀಲ ವೃತ್ತಿಯಿಂದ ಡಿಬಾರ್ ಮಾಡುವುದಾಗಿ ತಿಳಿಸಿದೆ. ನಾನು ಈ ಹಿಂದೆ ಹೇಳಿದಂತೆ ದಂಡ ಪಾವತಿಸಲಾಗಿದೆ'' ಎಂದು ಹೇಳಿದ್ದಾರೆ.
ಹಾಗೆಯೇ ''ಇದು ನನ್ನ ಹಾಗೂ ಸುಪ್ರೀಂ ಕೋರ್ಟ್ ನಡುವಿನ ವಿಚಾರವಲ್ಲ. ಬದಲಾಗಿ ನನ್ನ ಹಾಗೂ ಜಡ್ಜ್ ನಡುವಿನ ವಿಚಾರ. ಯಾವಾಗ ಸುಪ್ರೀಂ ಕೋರ್ಟ್ ಜಯ ಕಾಣುತ್ತದೆಯೋ ಅಂದು ಭಾರತೀಯರು ಜಯ ಕಾಣುತ್ತಾರೆ'' ಎಂದು ಹೇಳಿದ್ದಾರೆ.
''ಸುಪ್ರೀಂ ಕೋರ್ಟ್ಗೆ ಅಗೌರವ ತೋರುವ ಉದ್ದೇಶ ನನ್ನ ಟ್ವೀಟ್ನಲ್ಲಿ ಇಲ್ಲ. ಬದಲಾಗಿ ನನ್ನ ಅಸಮಧಾನ ತೋರ್ಪಡಿಕೆಯಾಗಿದೆ'' ಎಂದು ಹೇಳಿದ್ದಾರೆ.
ಸಿಜೆಐ ಎಸ್.ಎ. ಬೋಬ್ದೆ ಕಲಾಪಕ್ಕೆ ಗೈರು ಹಾಜರಾಗಿ ಐಷಾರಾಮಿ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಟ್ವೀಟ್ನಲ್ಲಿ ನಿಂದಿಸಿದ್ದರು.