ನವದೆಹಲಿ, ಸೆ. 01 (DaijiworldNews/MB) : ''ಭಾರತದ ಆರ್ಥಿಕತೆ ಚೇತರಿಕೆಗೆ ಹಲವು ತಿಂಗಳುಗಳೇ ಬೇಕು'' ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ''ಉತ್ಪಾದನೆ, ನಿರ್ಮಾಣ ಕಾರ್ಯ, ವ್ಯಾಪಾರ, ಹೋಟೆಲ್ಗಳು ಮತ್ತು ಸಾರಿಗೆ ಸೇರಿದಂತೆ ಇತರ ವಲಯಗಳಲ್ಲಿ ಭಾರೀ ಕುಸಿತ ಕಂಡಿದ್ದು ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಮಾತ್ರ ಈ ತ್ರೈಮಾಸಿಕದಲ್ಲಿ ಕೊಂಚ ಬೆಳವಣಿಗೆ ಕಂಡಿದೆ. ಕಳೆದ 12 ತಿಂಗಳಲ್ಲಿ ಜೂನ್ 30 2019ರವರೆಗೆ ಒಟ್ಟು ದೇಶೀಯ ಉತ್ಪಾದನೆಯ ಕಾಲು ಭಾಗ ಕುಸಿತ ಕಂಡಿದೆ. ಇನ್ನು ಈ ಎಲ್ಲಾ ಅಂದಾಜುಗಳಿಂದಾಗಿ ಏನು ನಮಗೇನು ಆಶ್ಚರ್ಯವಾಗುವುದು ಏನು ಇಲ್ಲ, ಸರ್ಕಾರಕ್ಕೆ ಅವು ಆಶ್ಚರ್ಯವಾಗಬೇಕು. ಆರ್ಥಿಕತೆ ಚೇತರಿಕೆಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರಕ್ಕೆ ನಾಚಿಕೆಯಾಗಬೇಕು'' ಎಂದು ಹೇಳಿದ್ದಾರೆ.
''ಭಾರತದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ದ ಇತ್ತೀಚಿನ ವಾರ್ಷಿಕ ವರದಿಯು ಇವೆಲ್ಲದ ಬಗ್ಗೆ ಮುನ್ಸೂಚನೆ ನೀಡಿದೆ. ಅದರಂತೆ ಕಾಂಗ್ರೆಸ್ ಕೂಡಾ ಸರ್ಕಾರಕ್ಕೆ ಕ್ರಮಕೈಗೊಳ್ಳುವಂತೆ ಆಗ್ರಹ ಮಾಡಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಆರ್ಥಿಕತೆ ಅಧಃಪತನಕ್ಕೆ ಕಾರಣವಾಗಿದೆ. ಇನ್ನು ನಮ್ಮ ಆರ್ಥಿಕತೆ ಚೇತರಿಸಿಕೊಳ್ಳಲು ಹಲವು ತಿಂಗಳುಗಳು ಬೇಕು'' ಎಂದು ಹೇಳಿದ್ದಾರೆ.