ಬೆಂಗಳೂರು, ಸೆ. 01 (DaijiworldNews/MB) : ಕೇಂದ್ರವು ಜಾರಿ ಮಾಡಿರುವ ಅನ್ಲಾಕ್ 4 ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯ ಸರ್ಕಾರವು ಕೂಡಾ ಅನ್ಲಾಕ್ 4 ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಹಲವು ಸೇವೆಗಳಿಗೆ ಅವಕಾಶ ನೀಡಿದೆ.
ಈ ಮಾರ್ಗಸೂಚಿಯ ಪ್ರಕಾರವಾಗಿ ಪದವಿ ಕಾಲೇಜುಗಳ ಆನ್ಲೈನ್ ಶಿಕ್ಷಣ, ಪದವಿ ಕಾಲೇಜುಗಳ ಆನ್ಲೈನ್ ಶಿಕ್ಷಣ, ದೇವಾಲಯಗಳಲ್ಲಿ ವಿಶೇಷ ಸೇವೆಗೆ ಅವಕಾಶ ದೊರೆಯುತ್ತದೆ. ಕಳೆದ 5 ತಿಂಗಳಿಂದ ಬಂದ್ ಆಗಿದ್ದ ಬಾರ್ ಹಾಗೂ ರೆಸ್ಟೋರೆಂಟ್, ಪಬ್ಗಳು, ಕ್ಲಬ್ಗಳು ಕೂಡಾ ತೆರೆಯಲಿದೆ.
ಸೋಮವಾರ ಅಬಕಾರಿ ಆಯುಕ್ತರು ಈ ಆದೇಶವನ್ನು ಹೊರಡಿಸಿದ್ದು ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ. ಒಂದು ಬಾರಿಗೆ 50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಕೊರೊನಾ ಸಂಬಂಧಿಸಿ ಸಾಮಾಜಿಕ ಅಂತರ ಮೊದಲಾದ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಲಾಕ್ಡೌನ್ ಬಳಿಕ ದೇವಾಲಯಗಳನ್ನು ತೆರೆಯಲಾಗಿತ್ತಾದರೂ ಯಾವುದೇ ಸೇವೆಗಳಿಗೆ ಅವಕಾಶವಿರಲಿಲ್ಲ. ಇದೀಗ ಇಂದಿನಿಂದ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಸೇವೆ ಆರಂಭವಾಗಲಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಹಾಗೆಯೇ ಅನ್ನದಾನ, ರಥೋತ್ಸವದಂತಹ ಅಧಿಕ ಜನ ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಅಂತರರಾಜ್ಯ ಮತ್ತು ರಾಜ್ಯದೊಳಗೆ ಮುಕ್ತ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಇನ್ನು ಮುಂದೆ ಇ–ಪಾಸ್ಗಳು ಪಡೆಯಬೇಕಿಲ್ಲ. ಹಾಗೆಯೇ ಬೆಂಗಳೂರು ನಗರದಲ್ಲಿ ಸೆ.7 ರಿಂದ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇಂದು ಲಾಕ್ಡೌನ್ ಬಳಿಕ ರಾಜ್ಯದ ಪದವಿ ಕಾಲೇಜುಗಳಲ್ಲಿ ಆನ್ಲೈನ್ ಶಿಕ್ಷಣ ಆರಂಭವಾಗಲಿದೆ. ಇನ್ನು ಅಕ್ಟೋಬರ್ನಿಂದ ಭೌತಿಕವಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ತರಗತಿ ನೀಡಲಿದೆ ಎಂದು ಹೇಳಲಾಗಿದೆ.