ನವದೆಹಲಿ, ಸೆ. 01 (DaijiworldNews/MB) : ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಅಂತ್ಯ ಸಂಸ್ಕಾರವು ಸೇನೆಯ ಸಕಲ ಗೌರವಗಳೊಂದಿಗೆ ಮಂಗಳವಾರ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಣಬ್ ನಿವಾಸಕ್ಕೆ ಭೇಟಿ ನೀಡಿ ಮಾಜಿ ರಾಷ್ಟ್ರಪತಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಪ್ರಣಬ್ ನಿಧನದ ಕಾರಣ ಆಗಸ್ಟ್ 31 ರಿಂದ ಸೆಪ್ಟೆಂಬರ್ 6 ರವರೆಗೆ ದೇಶದಾದ್ಯಂತ ಶೋಕಾಚರಣೆ ಇರಲಿದೆ ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷ ಪ್ರಾಯದ ಪ್ರಣಬ್ ಮುಖರ್ಜಿ ಅವರು ಮೆದುಳು ಚಿಕಿತ್ಸೆಯ ಬಳಿಕ ಕೋಮಾಕ್ಕೆ ಜಾರಿದ್ದು ಸೋಮವಾರ ಕೊನೆಯುಸಿರೆಳೆದಿದ್ದಾರೆ. ಚಿಕಿತ್ಸೆಗೂ ಮುನ್ನ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು.
ಅಂತಿಮ ಕ್ರಿಯೆಗೂ ಮುನ್ನ ಪ್ರಣಬ್ ಅವರ ಪಾರ್ಥಿವ ಶರೀರದ ದರ್ಶನಕ್ಕಾಗಿ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು ಕೊರೊನಾ ಮಾರ್ಗಸೂಚಿಯಂತೆ ಅಂತಿಮ ವಿಧಿಗಾಗಿ ಮೃತದೇಹವನ್ನು ತೆರೆದ ವಾಹನದ ಬದಲು ಶವ ಸಾಗಾಟ ವಾಹನದಲ್ಲಿಯೇ ಕೊಂಡೊಯ್ಯಲಾಗುತ್ತದೆ. ಅಂತ್ಯಕ್ರಿಯೆ ಲೋದಿ ರಸ್ತೆಯಲ್ಲಿರುವ ಚಿತಾಗಾರದಲ್ಲಿ ನಡೆಯಲಿದೆ.
ಭಾರತ ರತ್ನ ಪ್ರಶಸ್ತಿ ವಿಜೇತರಾದ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.