ಲಕ್ನೋ, ಸೆ.1(DaijiworldNews/HR): ಡಾ. ಕಫೀಲ್ ಖಾನ್ ವಿರುದ್ಧದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಆರೋಪವನ್ನು ನ್ಯಾಯಾಲಯ ರದ್ದುಪಡಿಸಿ, ಖಾನ್ ಅವರನ್ನು ಬಂಧಿಸಿರುವುದು ಕಾನೂನು ಬಾಹಿರ ಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
ಖಾನ್ ಅವರನ್ನು ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮಥುರಾ ಜೈಲಿನಲ್ಲಿ ಇರಿಸಲಾಗಿದೆ. ಸಿಎಎ ವಿರೋಧಿ ಪ್ರತಿಭಟನೆಗಳ ಮಧ್ಯೆ 2019 ರ ಡಿಸೆಂಬರ್ 13 ರಂದು ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಅವರನ್ನು ಈ ವರ್ಷದ ಜನವರಿಯಲ್ಲಿ ಮುಂಬೈಯಿಂದ ಬಂಧಿಸಲಾಯಿತು.
ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಎನ್ಎಸ್ಎ ಅಡಿಯಲ್ಲಿ ಡಾ. ಖಾನ್ ವಿರುದ್ಧದ ವಿಚಾರಣೆಯ ಮೂಲ ದಾಖಲೆಯನ್ನು ಪರಿಶೀಲಿಸಿದ ನಂತರ ಈ ವಿಷಯದಲ್ಲಿ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಪೀಠ ಕಳೆದ ವಾರ ಎರಡು ದಿನಗಳ ವಿಚಾರಣೆಯನ್ನು ನಡೆಸಿದ್ದು, ಮಂಗಳವಾರ ಅಂತಿಮ ವಿಲೇವಾರಿಗಾಗಿ ಈ ವಿಷಯವನ್ನು ಪಟ್ಟಿ ಮಾಡಲಾಗಿದೆ. ವಿಶೇಷವೆಂದರೆ, ಫೆಬ್ರವರಿ 10 ರಂದು ಖಾನ್ ಅವರಿಗೆ ಸಿಜೆಎಂ, ಅಲಿಗ್ರಾಂ ನ್ಯಾಯಾಲಯವು ಜಾಮೀನು ನೀಡಿತ್ತು. ಆದಾಗ್ಯೂ, ಅವರು ಎನ್ಎಸ್ಎ ಕಾಯ್ದೆಯಡಿ ಜೈಲಿನಲ್ಲಿದ್ದರು.
ಖಾನ್ ಅವರ ತಾಯಿ ತನ್ನ ಮಗನನ್ನು ಬಿಡುಗಡೆ ಮಾಡುವಂತೆ ಕೋರಿ ಆಕೆ ಈ ವರ್ಷದ ಮಾರ್ಚ್ನಲ್ಲಿ ಮೊದಲು ಸುಪ್ರೀಂ ಕೋರ್ಟ್ಗೆ ಮೆಟ್ಟಿಲೇರಿದ್ದರು.
ಸಿಜೆಐ ಎಸ್ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಅಲಹಾಬಾದ್ ಹೈಕೋರ್ಟ್ ಈ ಮನವಿಯನ್ನು ಇತ್ಯರ್ಥಪಡಿಸಿತು.