ಬೆಂಗಳೂರು, ಸೆ.1(DaijiworldNews/HR): ವಿಶ್ವದ ಅನೇಕ ದೇಶಗಳಲ್ಲಿ ಡ್ರಗ್ಸ್ ಸಂಪೂರ್ಣ ನಿಷೇಧಿಸಲಾಗಿದೆ ಅಂತೆಯೇ ನಮ್ಮ ದೇಶ, ರಾಜ್ಯದಲ್ಲೂ ಡ್ರಗ್ ಮಾಫಿಯಾವನ್ನು ಸಂಪೂರ್ಣ ನಿಷೇಧಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ಹಾಗೂ ನಟಿ ತಾರಾ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈಗಾಗಲೇ ಡ್ರಗ್ಸ್ ಗೆ ಸಂಬಂಧಿಸಿದಂತೆ ಯುವಜನತೆ, ಅನೇಕ ಚಿತ್ರರಂಗದ ಕಲಾವಿರದ ಹೆಸರು ಕೇಳಿ ಬರುತ್ತಿರುವುದು ವಿಷಾದನೀಯವಾಗಿದೆ.
ಸುಮಾರು ಯುವಕ ಯುವತಿಯರು ಇತ್ತೀಚಿನ ವರ್ಷದಲ್ಲಿ ಕೆಲವು ಶಾಲಾ ಕಾಲೇಜುಗಳಲ್ಲಿ ಗಣನೀಯವಾಗಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದು, ಇಂತಹ ದುಶ್ಚಟಗಳನ್ನು ನಿಯಂತ್ರಿಸಲು ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಮೂರು ತಿಂಗಳಿಗೊಮ್ಮೆ ಸಾಮಾಜಿಕ ಅರೋಗ್ಯ ತಪಾಸಣೆ ನಡೆಸುವುದು ಸೂಕ್ತ ಏಕೆಂದರೆ ಕೆಲವು ಮಾದಕ ವಸ್ತುಗಳನ್ನು ಸೇವಿಸಿದಾಗ ಅದು ನಮ್ಮ ರಕ್ತ ಕಣಗಳಲ್ಲಿ ಮತ್ತು ಮೂತ್ರಗಳಲ್ಲಿ 70-80 ದಿನಗಳವರೆಗೆ ಜೀವಂತವಾಗಿರುತ್ತವೆ ಹಾಗಾಗಿ ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭ ದುಶ್ಚಟಕ್ಕೆ ಬಲಿಯಾದವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ ಮತ್ತೆ ಪ್ರಾರಂಭದಲ್ಲೇ ಅವರನ್ನು ಆ ಜಾಲದಿಂದ ಹೊರತರಲು ಪೋಷಕರು ಹಾಗೂ ಶಾಲಾ ಸಿಬ್ಬಂದಿಗಳಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಅನೇಕ ದೇಶಗಳಲ್ಲಿ ಈಗಾಗಲೇ ಡ್ರಗ್ ಸಂಪೂರ್ಣ ನಿಷೇಧಿಸಿದೆ, ಅದು ನಮ್ಮ ದೇಶದಲ್ಲಿ ಯಾಕೆ ಆಗುತ್ತಿಲ್ಲ? ಶ್ರೀಲಂಕಾದಲ್ಲಿ ಡ್ರಗ್ ಮಾರಾಟ ಮಾಡುವವರನ್ನು ನೇಣುಗಂಬಕ್ಕೆ ಏರಿಸುವ ಕಾನೂನು ಇದೆ, ಇದೇ ಕಾನೂನನ್ನು ನಮ್ಮ ದೇಶದಲ್ಲೂ ತಂದರೆ ಡ್ರಗ್ ಮಾಫಿಯಾವನ್ನು ತಡೆಗಟ್ಟಲು ಸಾಧ್ಯ ಎಂದಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಹಲವಾರು ಐತಿಹಾಸಿಕ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ್ದು ಡ್ರಗ್ ನಿಯಂತ್ರಣಕ್ಕೂ ನಿರ್ದಾಕ್ಷೀಣ್ಯ ಕ್ರಮಗಳನ್ನು ಕೈಗೊಂಡು ಡ್ರಗ್ ಮುಕ್ತ ಕರ್ನಾಟಕವನ್ನಾಗಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಮಾಡಿದ್ದಾರೆ.