ನವದೆಹಲಿ, ಸೆ. 01 (DaijiworldNews/MB) : ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಸರ್ಕಾರಿ ಮತ್ತು ಮಿಲಿಟರಿ ಗೌರವಗಳೊಂದಿಗೆ ಇಲ್ಲಿನ ಲೋದಿ ರಸ್ತೆಯಲ್ಲಿರುವ ಚಿತಾಗಾರಾದಲ್ಲಿ ನಡೆಯಿತು.
ಪುತ್ರ ಅಭಿಜಿತ್ ಮುಖರ್ಜಿ ತಮ್ಮ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದು ಪಿಪಿಇ ಕಿಟ್ ಧರಿಸಿದ ಕುಟುಂಬ ಸದಸ್ಯರು, ಸಂಬಂಧಿಕರು ಅಂತಿಮ ವಿಧಿ ವಿಧಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಂತಿಮ ಕ್ರಿಯೆಗೂ ಮುನ್ನ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಪ್ರಣವ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷ ಪ್ರಾಯದ ಪ್ರಣಬ್ ಮುಖರ್ಜಿ ಅವರು ಮೆದುಳು ಚಿಕಿತ್ಸೆಯ ಬಳಿಕ ಕೋಮಾಕ್ಕೆ ಜಾರಿದ್ದು ಸೋಮವಾರ ಕೊನೆಯುಸಿರೆಳೆದಿದ್ದಾರೆ. ಚಿಕಿತ್ಸೆಗೂ ಮುನ್ನ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು.