ನವದೆಹಲಿ, ಸೆ.1(DaijiworldNews/HR):ಟೆಲಿಕಾಂ ಸಂಸ್ಥೆಗಳು ಸರ್ಕಾರಕ್ಕೆ ಪಾವತಿಸಬೇಕಿರುವ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಪಾವತಿಗೆ ಸುಪ್ರೀಂಕೋರ್ಟ್ ಕೆಲವು ಷರತ್ತುಗಳೊಂದಿಗೆ 10 ವರ್ಷಗಳ ಕಾಲಾವಕಾಶವನ್ನು ನೀಡಿದೆ.
ದೂರಸಂಪರ್ಕ ಇಲಾಖೆಗೆ (ಡಿಒಟಿ) ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯೂ (ಎಜಿಆರ್) ಸಂಬಂಧಿತ ಬಾಕಿ ಪಾವತಿಸಲು ವೊಡಾಫೋನ್ ಐಡಿಯಾ, ಭಾರ್ತಿ ಏರ್ಟೆಲ್ ಮತ್ತು ಟಾಟಾ ಟೆಲಿ ಸರ್ವಿಸಸ್ನಂತಹ ಟೆಲಿಕಾಂ ಸಂಸ್ಥೆಗಳಿಗೆ ಮಾರ್ಚ್ 31, 2021 ರೊಳಗೆ ಶೇ 10 ರಷ್ಟು ಎಜಿಆರ್ ಸಂಬಂಧಿತ ಬಾಕಿ ಹಣವನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಬಾಕಿ ಪಾವತಿಸಲು ನಾಲ್ಕು ವಾರಗಳಲ್ಲಿ ಜವಾಬ್ದಾರಿ ಅಥವಾ ವೈಯಕ್ತಿಕ ಖಾತರಿ ನೀಡುವಂತೆ ಸಂಬಂಧಪಟ್ಟ ಟೆಲಿಕಾಂ ಕಂಪನಿಗಳ ಎಂಡಿ, ಅಥವಾ ಸಿಇಒ ಅವರನ್ನು ನ್ಯಾಯಪೀಠ ಕೇಳಿದೆ. ಅಲ್ಲದೆ ಟೆಲಿಕಾಂ ಕಂಪನಿಗಳಿಗೆ ಕೋರ್ಟ್ ಎಚ್ಚರಿಕೆ ನೀಡಿದ್ದು, ಜಿಆರ್ ಸಂಬಂಧಿತ ಬಾಕಿಗಳನ್ನು ಪಾವತಿಸಲು ವಿಫಲವಾದರೆ ದಂಡ, ಬಡ್ಡಿ ಮತ್ತು ನ್ಯಾಯಾಲಯದ ಆದೇಶ ಉಲ್ಲಂಘನೆಯ ಅಪರಾಧಕ್ಕೆ ಗುರಿಯಾಗಬೇಕಾಗುವುದು ಎಂದಿದೆ.
ಟೆಲಿಕಾಂ ಕಂಪನಿಗಳ ಸ್ಪೆಕ್ಟ್ರಮ್ ಮಾರಾಟದ ಸಮಸ್ಯೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ನಿರ್ಧರಿಸುತ್ತದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ. ಎಜಿಆರ್ ಸಂಬಂಧಿತ ಬಾಕಿಗಳನ್ನು ಸುಮಾರು 1.6 ಲಕ್ಷ ಕೋಟಿ ರೂ.ಗಳಂತೆ ಪಾವತಿಸಲು ಟೈಮ್ಲೈನ್ ಸೇರಿದಂತೆ ವಿಷಯಗಳ ಕುರಿತು ನ್ಯಾಯಪೀಠ ತನ್ನ ತೀರ್ಪು ನೀಡಿದೆ.