ನವದೆಹಲಿ, ಸೆ. 01 (DaijiworldNews/MB) : ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಅಶೋಕ್ ನವಾಸ್ಯಾ ಅವರು ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಸ್ಥಾನವನ್ನು 1984ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ಅಧಿಕಾರಿಯಾಗಿದ್ದ ರಾಜೀವ್ ಕುಮಾರ್ ಅವರು ತುಂಬಿದ್ದಾರೆ. ಲಾವಾಸ ಅವರು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ರಾಜೀವ್ ಕುಮಾರ್ ಅವರ ಅಧಿಕಾರಾವಧಿ 2025ರವರೆಗೂ ಇರಲಿದೆ. ಇವರ ಅವಧಿಯಲ್ಲೇ 2024ನೇ ಸಾಲಿನ ಲೋಕಸಭೆ ಚುನಾವಣೆ ನಡೆಯಲಿದೆ.
ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿದ್ದ ಅವರು ಈ ವರ್ಷದ ಫೆಬ್ರವರಿಯಲ್ಲಿ ನಿವೃತ್ತರಾಗಿದ್ದರು. ಬಳಿಕ ಅವರನ್ನು ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ (ಪಿ.ಇ.ಎಸ್.ಬಿ) ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.