ನವದೆಹಲಿ, ಸೆ. 01 (DaijiworldNews/MB) : ತಾನು ವಾಸವಿದ್ದ ರೂಮ್ನ ಬಾಡಿಗೆ ಪಾವತಿಸಲು ಒತ್ತಡ ಹೇರಿದರೆಂದು ತನ್ನ ರೂಮ್ಮೇಟ್ಗಳನ್ನು ಯುವಕ ಹತ್ಯೆಗೈದ ಘಟನೆ ಪಶ್ಚಿಮ ದೆಹಲಿಯ ರಘುಬೀರ್ ನಗರದಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಾಕೀರ್ (23) ತನ್ನ ರೂಮ್ಮೇಟ್ಗಳಾದ ಅಜಮ್ (45) ಮತ್ತು ಅಮೀರ್ ಹಸನ್ (46) ರನ್ನು ಹತ್ಯೆಗೈದ ಬಳಿಕ ತನ್ನ ಊರಾದ ಉತ್ತರ ಪ್ರದೇಶದ ಅಮ್ರೋಹಾ ಹಳ್ಳಿಗೆ ತೆರಳಿದ್ದು ಶೀಘ್ರವೇ ಅಲ್ಲಿಗೆ ತೆರಳಿದ ಪೊಲೀಸರ ತಂಡವು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಅಜಮ್ ಹಾಗೂ ಅಮೀರ್ ಹಸನ್ ಜೊತೆ ರಘುಬೀರ್ ನಗರದಲ್ಲಿ ಬಾಡಿಗೆ ಫ್ಲ್ಯಾಟ್ ಒಂದರಲ್ಲಿ ತಂಗಿದ್ದು, ಈ ಬಾಡಿಗೆ ಮನೆಗೆ ರೂ. 4 ಸಾವಿರ ಪಾವತಿಸುತ್ತಿದ್ದರು. ಅಜಮ್ ಮತ್ತು ಅಮೀರ್ 1994 ರಿಂದ ಅಲ್ಲಿಯೇ ತಂಗಿದ್ದರು. ಈ ವರ್ಷದ ಆರಂಭದಲ್ಲಿ ಸಾಕೀರ್ ತನ್ನ ಹಳ್ಳಿಗೆ ತೆರಳಿದ್ದು ಸುಮಾರು ನಾಲ್ಕು ತಿಂಗಳುಗಳ ಕಾಲ ಅಲ್ಲಿಯೇ ಇದ್ದು 15 ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ತನ್ನ ಬಾಡಿಗೆ ಫ್ಲಾಟ್ಗೆ ವಾಪಾಸ್ ಆಗಿದ್ದರು.
ಆದರೆ ವಾಪಾಸ್ ಆದ ಬಳಿಕ ಆತ ತನ್ನ ಹಳ್ಳಿಯಲ್ಲಿದ್ದ ನಾಲ್ಕು ತಿಂಗಳುಗಳ ಬಾಡಿಗೆಯನ್ನು ಪಾವತಿಸುವಂತೆ ಒತ್ತಡ ಹೇರಲಾರಭಿಸಿದ್ದರು. ಇದರಿಂದ ಆರೋಪಿ ಹಾಗೂ ಹತ್ಯೆಗೊಳಗಾದವರ ನಡುವೆ ವಾದ ನಡೆದಿದ್ದು ಹತ್ಯೆಗೊಳಗಾದ ಅಜಮ್ ಹಾಗೂ ಅಮೀರ್ ಆರೋಪಿ ನಿಂದನೆ ಮಾಡಿದ್ದರು. ಇದೇ ಸೇಡಿನಿಂದ ಆತ ಅವರ ಹತ್ಯೆ ಮಾಡಿದ್ದಾನೆ. ಆಗಸ್ಟ್ 30ರ ಮಧ್ಯರಾತ್ರಿಯಲ್ಲಿ ರೂಮ್ಮೇಟ್ಗಳು ನಿದ್ದೆ ಮಾಡುತ್ತಿದ್ದಾಗ, ಆತ ಅವರ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಅದನ್ನು ಬಚ್ಚಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಶಂಕಿತ ಸಾಕೀರ್ ಪರಾರಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಆತ ಹಳ್ಳಿಯಲ್ಲಿ ಇರುವ ಬಗ್ಗೆ ದೊರೆಯ ಖಚಿತ ಮಾಹಿತಿಯಂತೆ ಹಳ್ಳಿಗೆ ಪೊಲೀಸರ ತಂಡ ತೆರಳಿ ಆತನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ದೀಪಕ್ ಪುರೋಹಿತ್ ತಿಳಿಸಿದ್ದಾರೆ.