ಬೆಂಗಳೂರು, ಸೆ.1(DaijiworldNews/HR): ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ ಎಂದು ಸಚಿವ ಸಿಟಿ ರವಿ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕನಲಿ ಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆಮೇಲೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವಾಗ ಶಾಸಕರ ಜೊತೆ ಕಂಪನಿ ಕೊಟ್ಟಿದ್ದರು ಎಂಬುದಾಗಿ ಆರೋಪಿಸಿದ್ದಾರೆ.
ಸಿ.ಟಿ. ರವಿ ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್, ಮಾಫಿಯಾ ಬಳಸಿಕೊಂಡೇ ನಮ್ಮ ಸರಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋದಾಗ ಯಾರು ಜೊತೆಯಲ್ಲಿ ಇದ್ದರು ಎಂಬುದು ಇಡೀ ನಾಡಿಗೆ ಗೊತ್ತಿದೆ ಎಂದಿದ್ದಾರೆ.
ಶಾಸಕರನ್ನು ಖರೀದಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ ಸರ್ಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.
ಖಜಾನೆಗೆ 25 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.
ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.