ತಿರುವನಂತಪುರಂ, ಸೆ. 02 (DaijiworldNews/MB) : ತಿರುವನಂತಪುರಂನ ವೆಂಜರಮೊಟ್ಟಂ ಎಂಬಲ್ಲಿ ಇಬ್ಬರು ಸಿಪಿಐ(ಎಂ) ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು ಪ್ರಕರಣದ ಆರೋಪಿಗಳಲ್ಲೋರ್ವನಾಗಿರುವ ಶಾಜಿತ್ ಎಂಬಾತನೊಂದಿಗೆ ಕಾಂಗ್ರೆಸ್ ಸಂಸದ ಆಡೂರ್ ಪ್ರಕಾಶ್ ನಂಟು ಹೊಂದಿದ್ದಾರೆ ಎನ್ನಲಾಗಿರುವ ಆಡಿಯೋ ಟೇಪ್ವೊಂದನ್ನು ಡಿವೈಎಫ್ಐ ಬಿಡುಗಡೆಗೊಳಿಸಿದೆ.
ಭಾನುವಾರ ಮಧ್ಯರಾತ್ರಿ ವೇಂಬಯಂ ಮೂಲದ ಮಿಥಿಲಾಜ್ (32), ಹಕ್ ಮುಹಮ್ಮದ್ (25) ಎಂಬ ಇಬ್ಬರು ಡಿವೈಎಫ್ಐ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ.
ಕೈಗಾರಿಕಾ ಸಚಿವ ಇ.ಪಿ. ಜಯರಾಜನ್ ಅವರು ಆರೋಪಿಗಳು ಕಾಂಗ್ರೆಸ್ ಮುಖಂಡ ಆಡೂರ್ ಪ್ರಕಾಶ್ ಅವರೊಂದಿಗೆ ನಂಟು ಹೊಂದಿದ್ದಾರೆ. ಆಡೂರು ಪ್ರಕಾಶ್ ನಂಟಿನ ಬಗ್ಗೆ ತನಿಖೆ ನಡೆಯಬೇಕು. ಈ ಹತ್ಯೆ ನಡೆದ ಬೆನ್ನಲ್ಲೇ ಶಾಜಿತ್ ಆಡೂರ್ ಅವರಿಗೆ ಕರೆ ಮಾಡಿದ್ದ ಎಂದು ಆರೋಪಿಸಿದ್ದು ಏತನ್ಮಧ್ಯೆ ಆಡಿಯೋ ಟೇಪ್ ಬಿಡುಗಡೆಗೊಳಿಸಲಾಗಿದೆ.
ಆದರೆ ತನ್ನೆಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಆಡೂರ್ ಪ್ರಕಾಶ್, ಈ ಪ್ರಕರಣಕ್ಕೆ ಸಂಬಂಧಿಸಿ ನನಗೆ ಯಾವುದೇ ಕರೆಗಳು ಬಂದಿಲ್ಲ. ಹಾಗೆಯೇ ನಾನು ಕೂಡಾ ನ್ಯಾಯಯುತ ವಿವ=ಚಾರ ಹೊರತುಪಡಿಸಿ ಇತರೆ ವಿಚಾರದಲ್ಲಿ ಪೊಲೀಸ್ ಠಾಣಗೆ ಕರೆ ಮಾಡಿಲ್ಲ. ಈ ಆರೋಪಗಳನ್ನು ಸಾಬೀತುಪಡಿಸುವುದು ಸಚಿವರ ಹೊಣೆ ಎಂದಿದ್ದಾರೆ.
ಇನ್ನು ಇದಕ್ಕೂ ಮೊದಲು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಅವರು, ಈ ಕೊಲೆಯಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ. ಸಿಪಿಐಎಂ ಕೊಲೆಯಲ್ಲಿ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ತಿಳಿಸಿದೆ.