ನವದೆಹಲಿ, ಸೆ. 02 (DaijiworldNews/MB) : ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಿಗೆ ಪತ್ರ ಬರೆದಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಹಿರಿಯ ಸಚಿವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸುವ ಕಾರ್ಯವನ್ನು ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಬಲ ಪಂಥೀಯ ತತ್ವದ ನಾಯಕರನ್ನು ಬೆಂಬಲಿಸುವವರಿಗೆ ಫೇಸ್ಬುಕ್ನಲ್ಲಿ ಪ್ರಚಾರ ನೀಡದಂತೆ, ಅವರ ವಿಚಾರ ಅಧಿಕ ಜನರಿಗೆ ತಲುಪದಂತೆ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಫೇಸ್ಬುಕ್ ಇಂಡಿಯಾದ ಸಿಬ್ಬಂದಿಗಳು ನಿರಂತರವಾಗಿ ಯತ್ನಿಸುತ್ತಿದ್ದಾರೆ. ಈ ಕುರಿತು ಪತ್ರಗಳನ್ನು ಫೇಸ್ ಬುಕ್ ಆಡಳಿತ ಮಂಡಳಿಗೆ ಬರೆದಿದ್ದರೂ ಕೂಡಾ ಯಾವುದೇ ಪ್ರತಿಕ್ರಿಯೆ ಇಲ್ಲ. ಬಿಜೆಪಿ ವಿರುದ್ದ ಫೇಸ್ಬುಕ್ ಇಂಡಿಯಾ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದರೂ ಕೂಡಾ ಬಿಜೆಪಿ ಇವೆಲ್ಲವನ್ನು ಮೀರಿ ಸರ್ಕಾರ ರಚಿಸಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೃತ್ಯಗಳು ನಡೆಯುತ್ತಿದ್ದು ಇವೆಲ್ಲದರ ಬಗ್ಗೆ ಫೇಸ್ಬುಕ್ ಕೇಂದ್ರ ಕಚೇರಿ ಉನ್ನತ ಮಟ್ಟದ ತನಿಖಾ ತಂಡ ರಚಿಸಿ ಫೇಸ್ಬುಕ್ ಇಂಡಿಯಾ ತಂಡದ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸಬೇಕು. ಹಾಗೆಯೇ ಈ ಬಗ್ಗೆ ಎರಡು ತಿಂಗಳೊಳಗೆ ವರದಿ ನೀಡಲು ಹೇಳಿ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ರವಿಶಂಕರ್ ಪ್ರಸಾದ್ ಪತ್ರದಲ್ಲಿ ಆಗ್ರಹಿಸಿದ್ದಾರೆ.