ಮಥುರಾ, ಸೆ. 02 (DaijiworldNews/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಉತ್ತರಪ್ರದೇಶದ ವೈದ್ಯ ಡಾ.ಕಫೀಲ್ ಖಾನ್ ಅವರನ್ನು ಬುಧವಾರ ಮಧ್ಯರಾತ್ರಿ ಮಥುರಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಡಾ. ಕಫೀಲ್ ಖಾನ್ ವಿರುದ್ಧದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಆರೋಪವನ್ನು ರದ್ದುಪಡಿಸಿ, ಖಾನ್ ಅವರನ್ನು ಬಂಧಿಸಿರುವುದು ಕಾನೂನು ಬಾಹಿರ ಎಂದು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತ್ತು.
ಕಫೀಲ್ ಭಾಷಣದಲ್ಲಿ ಯಾವುದೇ ದ್ವೇಷ ಹಾಗೂ ಹಿಂಸೆಯನ್ನು ಪ್ರಚೋಧಿಸುವ ಅಂಶಗಳು ಕಂಡು ಬಂದಿಲ್ಲ. ಅವರ ಬಂಧನ ಅಕ್ರಮವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು ಇದೀಗ ಕಫೀಲ್ ಅವರನ್ನು ತಡರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಸಿಎಎ ವಿರೋಧಿ ಪ್ರತಿಭಟನೆಗಳ ಮಧ್ಯೆ 2019 ರ ಡಿಸೆಂಬರ್ 13 ರಂದು ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಅವರನ್ನು ಈ ವರ್ಷದ ಜನವರಿಯಲ್ಲಿ ಮುಂಬೈಯಲ್ಲಿ ಬಂಧಿಸಲಾಗಿತ್ತು. ಬಳಿಕ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.