ಪಾಟ್ನಾ, ಸೆ 02 (DaijiworldNews/PY): ಶವವಾಗಿ ಪತ್ತೆಯಾಗಿದ್ದ ಯುವತಿಯೋರ್ವಳ ಅಂತ್ಯ ಸಂಸ್ಕಾರ ಮಾಡಿದ್ದ ಕುಟುಂಬಸ್ಥರಿಗೆ 10ನೇ ದಿನ ಕರೆ ಯುವತಿ ಕರೆ ಮಾಡಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ರಹೀಂಪುರದ ವ್ಯಕ್ತಿಯೋರ್ವರ ಮಗಳು ಮೇನಕಾ ಆ.22ರಂದು ನಾಪತ್ತೆಯಾಗಿದ್ದಳು. ಮಗಳ ಕಾಣೆಯಾಗಿರುವ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ, ಪೊಲೀಸರು ಕೂಡಾ ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದರು.
ಈ ನಡುವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಗಿತ್ತು. ಈ ವಿಚಾರವಾಗಿ ಪೊಲೀಸರು ಮೇನಕಾ ಪೋಷಕರಿಗೆ ಈ ಮಾಹಿತಿ ತಿಳಿಸಿದ್ದಾರೆ. ಶವವನ್ನು ನೋಡಿದ ಮೇನಕಾ ಪೋಷಕರು ಈ ಶವ ತಮ್ಮ ಮಗಳದ್ದು ಎಂದು ಗುರುತಿಸಿದ್ದಾರೆ. ಹಾಗಾಗಿ ಶವವನ್ನು ಮನೆಯವರಿಗೆ ಹಸ್ತಾಂತರ ಮಾಡಿದ್ದು, ಪೋಷಕರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅರ್ಧಂಬರ್ಧ ಸುಟ್ಟ ಶವವನ್ನು ಗಮನಿಸಿದ ಪೊಲೀಸರು ಇದು ಕೊಲೆಯ ಪ್ರಕರಣವೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.
ಅಂತ್ಯಸಂಸ್ಕಾರ ನಡೆಸಿ ಸರಿಯಾಗಿ 10 ದಿನಗಳ ಬಳಿಕ ಮೇನಕಾ ತಂದೆಗೆ ಒಂದು ಫೊನ್ ಕರೆ ಬಂದಿದ್ದು, ರಿಸೀವ್ ಮಾಡಿದ ಸಂದರ್ಭ, ಅಪ್ಪಾ, ನಾನು ನಿಮ್ಮ ಪುತ್ರಿ ಮೇನಕಾ ಮಾತನಾಡುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾಳೆ. ಈ ವೇಳೆ ಪೊಷಕರಿಗೆ ಈ ಮಾತನ್ನು ನಂಬುವುದೋ, ಅಥವಾ ಬಿಡಿವುದೋ ಎನ್ನುವ ಗೊಂದಲವುಂಟಾಗಿತ್ತು.
ಇದಾಗಿ ಸ್ವಲ್ಪ ಸಮಯದ ಬಳಿಕ ಮೇನಾಕಾ ಪೋಷಕರಿಗೆ ಸಂದೇಶ ಕಳುಹಿಸಿದ್ದು, ನಾನು ಸ್ವ-ಇಚ್ಚೆಯಿಂದ ಮನೆ ಬಿಟ್ಟು ಬಂದಿದ್ದೇನೆ. ನನ್ನಿಂದ ತಪ್ಪಾಗಿದೆ. ಈ ಕಾರಣಕ್ಕಾಗಿ ನನ್ನನ್ನು ಕ್ಷಮಿಸಿ. ನಾನು ಪ್ರೀತಿ ಮಾಡುತ್ತಿದ್ದ ಹುಡುಗನನ್ನು ವಿವಾಹವಾಗಿದ್ದೇನೆ. ನಾನು ಸತ್ತಿರುವ ಬಗ್ಗೆ ಮಾಧ್ಯಮಗಳನ್ನು ಸುದ್ದಿಯಾಗಿರುವ ಬಗ್ಗೆ ನಾನು ನೋಡಿದ್ದೇನೆ. ಆದರೆ, ನಾನು ಸತ್ತಿಲ್ಲ. ನಾನು ಕ್ಷೇಮವಾಗಿದ್ದೇನೆ ಎಂದಿದ್ದಾಳೆ.
ಈ ವಿಚಾರವಾಗಿ ಪೋಷಕರಿಗೆ ಏನು ಮಾಡಬೇಕೆಂದೇ ದೋಚದಾಗಿದ್ದು, ಮಗಳು ನಮಗೆ ಹೇಳದೆಯೇ ವಿವಾಹವಾಗಿದ್ದಾಳೆ ಎಂದು ಮೇನಕಾ ಪೋಷಕರು ಅವಕ್ಕಾಗಿದ್ದಾರೆ. ಇನ್ನು ಮತ್ತೊಂದೆಡೆ, ಮೇನಕಾ ಪೋಷಕರು ಅಂತ್ಯ ಸಂಸ್ಕಾರ ಮಾಡಿರುವ ಯುವತಿ ಯಾರೆಂದು ಪೊಲೀಸರಿಗೆ ತಿಳಿಯದಾಗಿದ್ದು, ತನಿಖೆ ಮುಂದುವರೆಸಿದ್ದಾರೆ.