ಬೆಂಗಳೂರು, ಸೆ. 02 (DaijiworldNews/MB) : ಆನ್ಲೈನ್ನಲ್ಲಿ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಲಾಗಿದ್ದು ಇತರ ರಾಜ್ಯಗಳು ಆನ್ಲೈನ್ನಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಗಮನಿಸಿ, ಅಬಕಾರಿ ಇಲಾಖೆಯ ಆಯುಕ್ತ ಲೋಕೇಶ್ ನೇತೃತ್ವದ ಸಮಿತಿಯನ್ನು ರಚಿಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಅವರು ಸೆಪ್ಟೆಂಬರ್ 1 ರ ಮಂಗಳವಾರ ತಿಳಿಸಿದ್ದಾರೆ.
"ಮಹಿಳೆಯರು ಮತ್ತು ಯುವಕರು ಮದ್ಯವನ್ನು ಖರೀದಿಸಲು ಹೊರಹೋಗುವುದು ಕಷ್ಟಕರವಾಗಿದೆ. ಆದ್ದರಿಂದ, ನಾವು ಆನ್ಲೈನ್ ಮದ್ಯ ಮಾರಾಟಕ್ಕೆ ಚಿಂತನೆ ನಡೆಸುತ್ತಿದ್ದೇವೆ. ಅನುಕೂಲ ಹಾಗೂ ನಕಾರಾತ್ಮಕ ಅಂಶಗಳ ಬಗ್ಗೆನಾವು ತಜ್ಞರೊಂದಿಗೆ ಚರ್ಚಿಸುತ್ತೇವೆ. ಆನ್ಲೈನ್ ಮದ್ಯ ಮಾರಾಟಕ್ಕೆ ಕೆಲವು ಭಾಗಗಳಿಂದ ಸಹಜವಾಗಿ ವಿರೋಧವಿದೆ. ಈ ಅಂಶಗಳನ್ನು ಒಳಗೊಂಡ ಅಧ್ಯಯನದ ವರದಿಯ ಬಳಿಕ ಸಿಎಂ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಈ ಸಂದರ್ಭದಲ್ಲಿ ಮಂಗಳವಾರದಿಂದ ಕ್ಲಬ್ಗಳು, ಪಬ್ಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮದ್ಯ ಸೇವನೆಗೆ ಅನುಮತಿ ನೀಡಲಾಗಿರುವುದನ್ನು ಉಲ್ಲೇಖಿಸಿ, ಸರ್ಕಾರವು ಪ್ರತಿದಿನ 80 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸುತ್ತದೆ. ಇದು ಇಲಾಖೆಯ ಆದಾಯದಲ್ಲಿ ಶೇಕಡಾ 50 ರಷ್ಟು ಏರಿಕೆಯಾಗಬಹುದು ಎಂದಿದ್ದಾರೆ.
ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಈಗಾಗಲೇ ಹೊಸ ಪರವಾನಗಿಗಳನ್ನು ನೀಡಲಾಗಿದೆ. ಇತರ ಮದ್ಯದಂಗಡಿಗಳಿಗೆ ಈಗ ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾದಕ ದ್ರವ್ಯ ಸೇವನೆ ಪ್ರಕರಣಗಳ ಬಗ್ಗೆ ಇಲಾಖೆಗೆ ತಿಳಿದು ಬಂದರೆ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳಲಾಗುವುದು. ಜಂಟಿ ಕಾರ್ಯಾಚರಣೆ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.