ನವದೆಹಲಿ, ಸೆ 02 (DaijiworldNews/PY): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಾಂಘೈ ಸಹಕಾರ ಸಂಸ್ಥೆಯ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ರಷ್ಯಾ ಪ್ರವಾಸಕ್ಕೆ ಬುಧವಾರ ತೆರಳಿದ್ದಾರೆ.
ಈ ಸಂದರ್ಭ ರಾಜನಾಥ್ ಸಿಂಗ್ ಅವರು, ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಕುರಿತು ರಷ್ಯಾದ ಸಹವರ್ತಿ ಸೆರ್ಗೆ ಶೋಯಿಗು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಎಲ್ಸಿಒನ ಎಲ್ಲಾ ಎಂಟು ಸದಸ್ಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳು ಭಯೋತ್ಪಾದನೆ ಹಾಗೂ ಉಗ್ರವಾದದಂತಹ ಪ್ರಾದೇಶಿಕ ಭದ್ರತೆ ಸವಾಲುಗಳ ಬಗ್ಗೆ ಹೇಗೆ ವ್ಯವಹರಿಸುವುದು ಎನ್ನುವ ವಿಚಾರದ ಬಗ್ಗೆ ಶುಕ್ರವಾರ ಮಾಸ್ಕೋದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ಮಾಸ್ಕೋಗೆ ತೆರಳುತ್ತಿದ್ದೇನೆ. ನಾನು ಎರಡನೇ ಮಹಾಯುದ್ದದ ವಿಜಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಶಾಂಘೈ ಸಹಕಾರ ಸಂಸ್ಥೆ, ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ ಹಾಗೂ ಸಿಐಎಸ್ ಸದಸ್ಯರ ಸಭೆಯಲ್ಲಿ ಭಾಗವಹಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ರಾಜನಾಥ್ ಸಿಂಗ್ ಅವರು ನಾಡಿದ್ದಿನ ಮಾತುಕತೆಯ ಸಂದರ್ಭ, ರಷ್ಯಾವು ಭಾರತಕ್ಕೆ ಪೂರೈಸಲಿರುವ ಶಸ್ತ್ರಾಸ್ತ್ರಗಳನ್ನು ಕೂಡಲೇ ಪೂರೈಕೆ ಮಾಡುವಂತೆ ಒತ್ತಾಯಿಸಲಿದ್ದಾರೆ. ಎಕೆ 203 ರೈಫಲ್ಗಳನ್ನು ತಯಾರಿಸುವ ಬಹುದಿನಗಳ ಪ್ರಸ್ತಾವನೆಯನ್ನು ಅಧಿಕೃತವಾಗಿ ಅಂತಿಮಗೊಳಿಸುವ ನಿರೀಕ್ಷೆಯಿದೆ. ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಸಕಾಲದಲ್ಲಿ ತಲುಪಿಸುವಂತೆ ಖಚಿತಪಡಿಸಿಕೊಳ್ಳಲು ಸಿಂಗ್ ರಷ್ಯಾದ ಕಡೆಯಿಂದ ವಿನಂತಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ -400 ಮೇಲ್ಮೈ ಕ್ಷಿಪಣಿಯು 2021ರ ವೇಳೆಗೆ ಭಾರತಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ನಿರೀಕ್ಷೆಯಿದೆ.