ಬೆಂಗಳೂರು, ಸೆ. 02 (DaijiworldNews/MB) : ಸ್ಯಾಂಡಲ್ ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಹೇಳುವುದರ ಮೂಲಕ ಈಗ ಭಾರೀ ಸುದ್ದಿಯಾಗಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ಸಿಸಿಬಿ ವಿಚಾರಣೆ ವೇಳೆ ವ್ಯಸನಿಗಳ ವಿರುದ್ದ ಕುರಿತು ಯಾವುದೇ ಪುರಾವೆ ನೀಡದೆ ಮರಳಿದ್ದಾರೆಂದು ಹೇಳಲಾಗುತ್ತಿದ್ದು ಈ ಕಾರಣದಿಂದ ಸಿಸಿಬಿ ಪೊಲೀಸರು ಇಂದ್ರಜಿತ್ ಲಂಕೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಸಮನ್ಸ್ ಜಾರಿ ಮಾಡಿರುವ ಸಿಸಿಬಿ ಪೊಲೀಸರು ಇಂದ್ರಜೀತ್ ಮಾಡಿರುವ ಆರೋಪಗಳಿಗೆ ಸೂಕ್ತ ಸಾಕ್ಷಿ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆಂದು ವರದಿಯಾಗಿದೆ. ಸೋಮವಾರ ವಿಚಾರಣೆ ಬಳಿಕ ಇಂದ್ರಜೀತ್ ಅವರು ಕೆಲವು ಹೆಸರನ್ನು ಹಾಗೂ ದಾಖಲೆಯನ್ನು ಹೇಳಿದ್ದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಅವರು, ಕನ್ನಡ ಚಿತ್ರರಂಗದಲ್ಲಿ ಮಾದಕ ಜಾಲದ ನಂಟಿದೆ ಎಂಬ ಇಂದ್ರಜೀತ್ ಅವರು ಆರೋಪ ಮಾಡಿದ ಹಿನ್ನೆಲೆ ಅವರನ್ನು ಕರೆಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಕೆಲವರ ಹೆಸರನ್ನು ಅವರು ಹೇಳಿದ್ದಾರೆ. ಆದರೆ ಅದಕ್ಕೆ ಬೇಕಾದ ಸಾಕ್ಷಿಯನ್ನು ಅವರು ನೀಡಿಲ್ಲ. ಯಾವುದೇ ರೀತಿಯ ಆಡಿಯೋ ವಿಡಿಯೋಗಳನ್ನು ನೀಡಿಲ್ಲ. ಹಾಗಾಗಿ ಅವರಲ್ಲಿರುವ ಮಾಹಿತಿ ನೀಡುವಂತೆ ಮತ್ತೆ ಸೂಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.