ಬೆಂಗಳೂರು, ಸೆ. 02 (DaijiworldNews/MB) : ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಹಾಗೂ ಪೊಲೀಸ್ ಠಾಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರು ಈಗ ಗುಣಮುಖರಾಗಿದ್ದು ಇದೀಗ ಬುಧವಾರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಹಾನಿಗೊಳಗಾಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಹಾಗೂ ಪೊಲೀಸ್ ಠಾಣೆಗೆ ಭೇಟಿನೀಡಿ, ಡಿಸಿಪಿ ಶರಣಪ್ಪ ಅವರಿಂದ ಘಟನೆಯ ಮಾಹಿತಿ ಪಡೆದುಕೊಂಡೆ. ಈ ವೇಳೆ ಶಾಸಕರಾದ ರಿಸ್ವಾನ್ ಅರ್ಶಾದ್, ನಸೀರ್ ಅಹ್ಮದ್, ವೆಂಕಟರಮಣಪ್ಪ ಅವರು ಸೇರಿದಂತೆ ಹಲವರು ಜೊತೆಗಿದ್ದರು ಎಂದು ತಿಳಿಸಿದ್ದಾರೆ.
ಒಂದುವೇಳೆ ಪ್ರವಾದಿ ಮಹಮದ್ ಅವರ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ ನವೀನ್ನ ಶೀಘ್ರ ಬಂಧನವಾಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ. ಗಲಭೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಗಲಭೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗದ ಹಲವರು ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಯಾರ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲ, ಯಾರು ನಿರಪರಾಧಿಗಳಿದ್ದಾರೆ ಅಂಥವರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ನೈಜ ಅಪರಾಧಿಗಳು ಯಾರೇ ಆಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಕಾರಣ ಆಗಸ್ಟ್ 11 ರಂದು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಭಾರೀ ಗಲಭೆ ನಡೆದಿದ್ದು ಈ ಸಂದರ್ಭದಲ್ಲಿ ನಡೆದ ಗೋಲಿಬಾರ್ನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ನವೀನ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.