ನವದೆಹಲಿ, ಸೆ. 02 (DaijiworldNews/MB) : ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಹಿರಿಯ ಸಚಿವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸುವ ಕಾರ್ಯ ಮಾಡುತ್ತಿದೆ. ಬಲಪಂಥೀಯ ವಿಚಾರಧಾರೆಗಳನ್ನು ಪ್ರಚಾರವಾಗದಂತೆ ತಡೆಯುತ್ತಿದೆ ಎಂದು ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಪತ್ರ ಬರೆದ ಮಧ್ಯೆ ಫೇಸ್ ಬುಕ್ ಬಿಜೆಪಿ ಪರ ಒಲವು ತೋರಿಸುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಿಇಒ ಮಾರ್ಕ್ ಝುಕರ್ ಬರ್ಗ್ಗೆ ಪತ್ರ ಬರೆದಿದೆ.
ರವಿಶಂಕರ್ ಪ್ರಸಾದ್ ಅವರು ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಬಲ ಪಂಥೀಯ ತತ್ವದ ನಾಯಕರನ್ನು ಬೆಂಬಲಿಸುವವರಿಗೆ ಫೇಸ್ಬುಕ್ನಲ್ಲಿ ಪ್ರಚಾರ ನೀಡದಂತೆ, ಅವರ ವಿಚಾರ ಅಧಿಕ ಜನರಿಗೆ ತಲುಪದಂತೆ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಫೇಸ್ಬುಕ್ ಇಂಡಿಯಾದ ಸಿಬ್ಬಂದಿಗಳು ನಿರಂತರವಾಗಿ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಈ ನಡುವೆ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಗಳ ಬಗ್ಗೆ ಫೇಸ್ಬುಕ್ನಲ್ಲಿ ನಕಾರಾತ್ಮಕ ಪ್ರಚಾರ ಮಾಡಲಾಗುತ್ತಿದೆ ಎಂದು ಪಕ್ಷದ ಸಂಸದ ಡೆರೆಕ್ ಓಬ್ರಿಯನ್ ಫೇಸ್ಬುಕ್ ಸಿಇಒಗೆ ಪತ್ರ ಬರೆದು ಸಾಕಷ್ಟು ಉದಾಹರಣೆಗಳು ಇವೆ ಎಂದು ಹೇಳಿದ್ದಾರೆ.
ಈ ಹಿಂದೆ ತಮ್ಮನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕೂಡ ಹೇಳಿದ್ದೆ. ಕಳೆದ ಜೂನ್ನಲ್ಲಿ ಸಂಸತ್ತು ಕಲಾಪ ವೇಳೆ ಕೂಡ ಪ್ರಸ್ತಾಪಿಸಿದ್ದೆವು 2014ರ ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಗಳ ಬಗ್ಗೆ ಫೇಸ್ ಬುಕ್ ನಲ್ಲಿ ನಕಾರಾತ್ಮಕ ವರದಿಗಳು, ಪ್ರಚಾರಗಳು ಹೆಚ್ಚು ಆಗುತ್ತಿದ್ದವು. ಇದು ಚುನಾವಣೆ ಮೇಲೆ ಹೆಚ್ಚು ಪ್ರಭಾವ ಬೀರಿದೆ. ನಮ್ಮ ರಾಜ್ಯದಲ್ಲಿ ಫೇಸ್ಬುಕ್ ಅಕೌಂಟ್ ತಡೆಹಿಡಿದಿರುವುದರ ಹಿಂದೆ ಬಿಜೆಪಿ ಕೈವಾಡವಿದೆ. ಫೇಸ್ಬುಕ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಬಿಜೆಪಿ ಸರ್ಕಾರದ ನಡುವೆ ಸಾಕಷ್ಟು ಒಪ್ಪಂದಗಳು, ವ್ಯವಹಾರಗಳು ನಡೆಯುತ್ತಿವೆ ಎಂಬುದಕ್ಕೆ ಬಹಿರಂಗವಾಗಿ ಸಾಕಷ್ಟು ಪುರಾವೆಗಳು ಸಿಗುತ್ತವೆ ಎಂದು ಹೇಳಿದ್ದಾರೆ.