ಮುಂಬೈ, ಸೆ 02 (DaijiworldNews/PY): ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿಗಳು ಬುಧವಾರ ಡ್ರಗ್ ಡೀಲರ್ ಓರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಜೈದ್ ಎಂದು ಗುರುತಿಸಲಾಗಿದೆ.
ಈತ ಬಾದ್ರಾದಲ್ಲಿ ಉಪಾಹಾರ ಗೃಹವನ್ನು ನಡೆಸುತ್ತಿದ್ದು, ಲಾಕ್ಡೌನ್ ಕಾರಣದಿಂದ ಯಾವುದೇ ಲಾಭ ಇಲ್ಲದ ಕಾರಣ ಆತ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ಆರಂಭಿಸಿದ್ದ. ಈ ಮೂಲಕ ಆತ ಗಣನೀಯ ಪ್ರಮಾಣದಲ್ಲಿ ಹಣ ಸಂಪಾದಿಸಿದ್ದಾನೆ ಎಂದು ಎನ್ಸಿಬಿ ತಿಳಿಸಿದೆ.
ಬಂಧಿತ ಮುಂಬೈನಲ್ಲಿ ನಡೆಯುವ ಐಶಾರಾಮಿ ಪಾರ್ಟಿಗಳಿಗೆ ಗಾಂಜಾ ಹಾಗೂ ಮಾದಕವಸ್ತುಗಳನ್ನು ಪೂರೈಸುತ್ತಿದ್ದನು. ಉತ್ತಮ ಗುಣಮಟ್ಟದ ಗಾಂಜಾವನ್ನು ಪ್ರತೀ ಗ್ರಾಂಗೆ ಸುಮಾರು 5 ಸಾವಿರದಂತೆ ಮಾರಾಟ ಮಾಡುತ್ತಿದ್ದನು ಎಂದು ಎನ್ಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈನ ಪಶ್ಚಿಮ ಭಾಗದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ, ಇಬ್ಬರನ್ನು ಎನ್ಸಿಬಿ ಪೊಲೀಸರು ಕಳೆದವಾರ ಬಂಧಿಸಿದ್ದರು. ಅಲ್ಲದೇ, ಮಹಾರಾಷ್ಟ್ರ ಸೇರಿದಂತೆ ಗೋವಾ, ದೆಹಲಿಯಲ್ಲಿ ಕೂಡಾ ಮಾದಕವಸ್ತುಗಳ ಕಳ್ಳಸಾಗಣೆ ಮಾಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.