ರಾಮನಗರ, ಸೆ 02 (DaijiworldNews/PY): ಕೊರೊನಾ ವೈದ್ಯಕೀಯ ಉಪಕರಣಕ್ಕೆ ಸಂಬಂಧಿಸಿದ ಗೋಲ್ ಮಾಲ್ ಬಗ್ಗೆ ಸರಿಯಾದ ಮಾಹಿತಿ ತೋರಿಸುವಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬುಧವಾರ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ವಿಚಾರದ ಬಗ್ಗೆ ಆರೋಪ ಮಾಡಿದ್ದಲ್ಲಿ ಆ ಬಗ್ಗೆ ಸಲ್ಲಿಸಲು ಸರಿಯಾದ ಮಾಹಿತಿ ಅಥವಾ ದಾಖಲೆ ಇರಬೇಕು. ಇದೇ ರೀತಿಯಾಗಿ ಕಾಂಗ್ರೆಸ್ ಕೂಡಾ ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಗೋಲ್ ಮಾಲ್ ಆಗಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಸೂಕ್ತವಾದ ಮಾಹಿತಿ ನೀಡದೇ ಕಾಂಗ್ರೆಸ್ ವಿಫಲವಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಸಮ್ಮಿಶ್ರ ಸರ್ಕಾರದ ಅವಧಿಯ ವೇಳೆ ನಾನು ಕೆಲಸ ಮಾಡಿದ್ದು, ಆದರೆ, ಆ ಸಂದರ್ಭ ಕೆಲಸ ಮಾಡಿದ್ದಾರೆ ಎನ್ನುವ ಹೆಸರು ಗಳಿಸಿದ್ದು ಕಾಂಗ್ರೆಸ್ ಎಂದಿದ್ದಾರೆ.
ಸಚಿವ ಸಿ.ಟಿ. ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರಿಂದಲೂ ಕೂಡಾ ನನಗೆ ನಶೆ ಬರಿಸಲು ಸಾಧ್ಯವಿಲ್ಲ. ಕೆಲವು ವ್ಯಕ್ತಿಗಳಿಗೆ ಅಧಿಕಾರ ಬಂದಾಗ ನಶೆ ಬರುತ್ತದೆ. ಆದರೆ, ಒಂದು ಮಾತು ನೆನೆಪಿನಲ್ಲಿಡಿ, ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ. ಅಕ್ರಮವಾದ ಮಾಫಿಯಾ ಹಣದ ಕಾರಣ ನನ್ನ ಸರ್ಕಾರ ಪತನವಾಯಿತು ಎಂದು ತಿಳಿಸಿದ್ದಾರೆ.
ಮಂಗಳೂರು ಗಲಭೆ ಆಯಿತು. ಬಳಿಕ ಇತ್ತೀಚೆಗೆ ಡಿ.ಜೆ.ಹಳ್ಳಿ ಗಲಭೆಯೂ ನಡೆಯಿತು. ಇದೀಗ ಡ್ರಗ್ಸ್ ದಂಧೆ. ಈ ಎಲ್ಲಾ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆಯೇ ವಿನಃ ಘಟನೆಯ ಸೂತ್ರಧಾರಿಗಳನ್ನು ಬಂಧಿಸಲು ಸರ್ಕಾರ ಮುಂದೆ ಬರುತ್ತಿಲ್ಲ. ಈ ನಡುವೆ ಪ್ರಧಾನಿ ಮೋದಿ ಸರ್ಕಾರ ದೇಶದ ಆರ್ಥಿಕತೆಯನ್ನು ಸರಿಪಡಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.