ಮೈಸೂರು, ಸೆ 02 (DaijiworldNews/PY): ದೇಶವನ್ನು ನಾಶ ಮಾಡಲು ಬಾಂಬ್ ಬೇಕಾಗಿಲ್ಲ. ಬದಲಾಗಿ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು ಅವರ ಮುಂದಿನ ಪೀಳಿಗೆ ಸೇರಿದಂತೆ ಇಡೀ ಕುಟುಂಬವನ್ನೇ ನಾಶ ಮಾಡಿ ಬಿಡುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯ ಒಂದು ಭಾಗವೇ ಈ ಡ್ರಗ್ಸ್ ದಂಧೆ. ದೇಶವನ್ನು ನಾಶ ಮಾಡಲು ಬಾಂಬ್ ಬೇಕಾಗಿಲ್ಲ. ಬದಲಾಗಿ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು ಅವರ ಮುಂದಿನ ಪೀಳಿಗೆ ಸೇರಿದಂತೆ ಇಡೀ ಕುಟುಂಬವನ್ನೇ ನಾಶ ಮಾಡಿ ಬಿಡುತ್ತದೆ ಎಂದರು.
ಡ್ರಗ್ ದಂಧೆಯಲ್ಲಿ ಯಾರು ಪಾಲ್ಗೊಂಡಿದ್ದಾರೆ. ಡ್ರಗ್ಸ್ ಬಗ್ಗೆ ಮಾಹಿತಿ ಇದ್ದವರು ತಿಳಿಸಿ. ಎಲ್ಲಾ ಕಡೆ ದಾಳಿ ನಡೆಸಲಿ. ಡ್ರಗ್ಸ್ ವಿರುದ್ದವಾಗಿ ನಾವೆಲ್ಲರೂ ಹೋರಾಡಬೇಕು. ಡ್ರಗ್ ದಂಧೆಯ ಬಗ್ಗೆ ಗೃಹ ಸಚಿವರು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಆಧಾರ ರಹಿತವಾದ ಮಾತು ಹಾಗೂ ಆರೋಪಗಳಿಗೆ ಉತ್ತರ ನೀಡುವುದಿಲ್ಲ. ಯಾವುದಾದರೂ ಒಂದು ವಿಚಾರದ ಬಗ್ಗೆ ಮಾತನಾಡಬೇಕಾದರೆ ಅದಕ್ಕೆ ಸೂಕ್ತವಾದ ಸಾಕ್ಷಿ, ಆಧಾರಗಳು ಇರಬೇಕು ಎಂದರು.