ನವದೆಹಲಿ, ಸೆ 02 (DaijiworldNews/PY): ಪಬ್ ಜಿ ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ದೇಶದ ಭದ್ರತೆ, ಸಮಗ್ರತೆ, ರಕ್ಷಣೆ ಹಾಗೂ ಸಾರ್ವಜನಿಕ ಸುವಸ್ಥೆಯನ್ನು ಗಮನದಲ್ಲಿಟ್ಟುಕೊಂಡು 118 ಆಪ್ಗಳನ್ನು ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರವು ಜೂನ್ನಲ್ಲಿ ಟಿಕ್ಟಾಕ್, ಶೇರ್ಇಟ್, ಹೆಲೊ, ಲೀಕೀ ಸೇರಿದಂತೆ 59 ಮೊಬೈಲ್ ಆ್ಯಪ್ಗಳನ್ನು ನಿಷೇಧ ಮಾಡಿತ್ತು. ಬಳಿಕ ಜುಲೈ ತಿಂಗಳಿನಲ್ಲಿ ಮತ್ತೆ ಚೀನಾದ 47 ಆಪ್ಗಳನ್ನು ನಿಷೇಧಿಸಿತ್ತು.
ಪೂರ್ವ ಲಡಾಖ್ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಜೂನ್ 15ರಂದು ಭಾರತ-ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಬಳಿಕ ಕೇಂದ್ರ ಸರ್ಕಾರವು ಚೀನಾ ಅಪ್ಲಿಕೇಶನ್ಗಳನ್ನು ನಿಷೇಧ ಮಾಡುವ ತೀರ್ಮಾನ ಮಾಡಿತ್ತು.
ಪಬ್ಜಿಯು ದಕ್ಷಿಣ ಏಷ್ಯಾ ಭಾಗದ ಜನಪ್ರಿಯ ಗೇಮ್ ಆಗಿದ್ದು, ಭಾರತ ಹಾಗೂ ಪಾಕಿಸ್ತಾನದಲ್ಲಿ ಈ ಗೇಮ್ನ ಜನಪ್ರಿಯತೆ ಹೆಚ್ಚಿದೆ.