ಬೆಂಗಳೂರು, ಸೆ. 3(DaijiworldNews/HR): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್ಸೈಟ್ಗೆ ಲಿಂಕ್ ಆಗಿರುವ ಟ್ವೀಟರ್ ಖಾತೆ ಹ್ಯಾಕ್ ಆಗಿರುವುದನ್ನು ಟ್ವಿಟರ್ ಖಚಿತ ಪಡಿಸಿದೆ.
ಈ ಖಾತೆಯಿಂದ ಹ್ಯಾಕರ್ ಗಳು ಬಿಟ್ ಕಾಯಿನ್ ದೇಣಿಗೆ ನೀಡುವಂತೆ ಕೋರಿ ಹಲವು ಟ್ವೀಟ್ ಗಳನ್ನು ಮಾಡಿದ್ದಾರೆ. ಅಷ್ಟೆ ಅಲ್ಲದೆ ಈ ಟ್ವೀಟರ್ ಖಾತೆ ಜಾನ್ ವಿಕ್ ಎಂಬಾತನಿಂದ ಹ್ಯಾಕ್ ಮಾಡಲಾಗಿದೆ ಎಂದೂ ಟ್ವೀಟ್ ಮಾಡಲಾಗಿದೆ.
ಮೋದಿ ಅವರ ವೆಬ್ಸೈಟ್ ಖಾತೆಯ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ವಿಟರ್ ಹೇಳಿದೆ.
ಸಕ್ರಿಯವಾಗಿ ಪರಿಸ್ಥಿತಿಯ ತನಿಖೆ ನಡೆಸುತ್ತಿದ್ದು,ಇತರೆ ಅಕೌಂಟ್ಗಳು ಇದರ ಪರಿಣಾಮಕ್ಕೆ ಒಳಗಾಗಿರುವ ಬಗ್ಗೆ ಪ್ರಸ್ತುತ ನಮ್ಮ ಗಮನಕ್ಕೆ ಬಂದಿಲ್ಲ' ಎಂದು ಟ್ವಿಟರ್ ವಕ್ತಾರರು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಮೋದಿಯವರ ಟ್ವಿಟರ್ ಖಾತೆಯಲ್ಲಿ ಪ್ರಕಟಗೊಂಡಿದ್ದ ಪೋಸ್ಟ್ಗಳ ಕುರಿತು ಮೋದಿ ಅವರ ಕಚೇರಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮೋದಿ ಅವರ ವೈಯಕ್ತಿಕ ವೆಬ್ಸೈಟ್ ಮತ್ತು ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಷನ್ಗೆ ಅಧಿಕೃತ ಟ್ವಿಟರ್ ಖಾತೆ ಇದಾಗಿದ್ದು, ಈ ಟ್ವಿಟರ್ ಖಾತೆಯನ್ನು 25 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.
ಜುಲೈನಲ್ಲಿ ಇದೇ ರೀತಿಯಾಗಿ ಹ್ಯಾಕರ್ಗಳು ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೀಡನ್, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಕೋಟ್ಯಧಿಪತಿ ಎಲಾನ್ ಮಸ್ಕ್ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದರು.