ಬೆಂಗಳೂರು, ಸೆ. 03 (DaijiworldNews/MB) : ಬಿ ಎಸ್ ಯಡಿಯೂರಪ್ಪನವರೆ, ನೀವು 'ರಾಜಾಹುಲಿ' ಎಂದು ಕರೆಸಿಕೊಂಡು ಮೋದಿಯವರ ಮುಂದೆ 'ಪೇಪರ್ ಟೈಗರ್' ಆಗಬೇಡಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಆದಾಯ ಕೊರತೆಯಿಂದಾಗಿ ಸಾಲ ಪಡೆಯುವ ಆಯ್ಕೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ವರದಿಯೊಂದನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಅವರು, ''ಬಿ ಎಸ್ ಯಡಿಯೂರಪ್ಪರವರೆ, ನೀವು 'ರಾಜಾಹುಲಿ' ಎಂದು ಕರೆಸಿಕೊಂಡು ಮೋದಿಯವರ ಮುಂದೆ 'ಪೇಪರ್ ಟೈಗರ್' ಆಗಬೇಡಿ. ಆದಾಯ ಸರಿದೂಗಿಸಲು ಜಿಎಸ್ಟಿ ಪಾಲನ್ನು ಪಡೆಯುವ ಬದಲು ನಾವ್ಯಾಕೆ ಆರ್ಬಿಐನಿಂದ ಸಾಲ ಪಡೆಯಬೇಕು? ಎಂದು ಪ್ರಶ್ನಿಸಿದ್ದು ತೆರಿಗೆ ಪಾಲು ಕೇಳುವುದು ನಮ್ಮ ಹಕ್ಕು. ಆ ಹಕ್ಕನ್ನೂ ಕೇಳದಷ್ಟು ನಿಮ್ಮ ನಾಲಗೆ ಬಿದ್ದು ಹೋಯ್ತೆ ಯಡಿಯೂರಪ್ಪನವರೆ!'' ಎಂದು ಮುಖ್ಯಮಂತ್ರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.