ಬೆಂಗಳೂರು, ಸೆ 03 (DaijiworldNews/PY): ಕೇವಲ ಒಬ್ಬ ವ್ಯಕ್ತಿ ಹಾಕಿದ ಕಾಮೆಂಟಿಗೆ ಊರಿಗೂರನ್ನೆ ನಾಶ ಮಾಡುವ ಮನಸ್ಥಿತಿಯ ಬಗ್ಗೆ ಮೌನವಾಗಿರುತ್ತೀರಿ. ಆದರೆ, ನಿಮ್ಮ "ಅಮಾಯಕ ಸರ್ಟಿಫಿಕೇಟ್ ಏಜೆನ್ಸಿ"ಯಿಂದ ಆರೋಪಿಗಳಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ಕೊಟ್ಟುಬಿಡುತ್ತೀರಿ. ತಪ್ಪನ್ನು ತಪ್ಪೆನ್ನುವ ಧೈರ್ಯ ಇನ್ನಾದರೂ ಬೆಳೆಸಿಕೊಳ್ಳಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕು ತಾನು ಪ್ರಪಂಚಕ್ಕೆ ಕಾಣುತ್ತಿಲ್ಲ ಎನ್ನುವಷ್ಟೇ ಬಾಲಿಶ ನಿಮ್ಮ ಹೇಳಿಕೆಗಳು ಮಾಜಿ ಮುಖ್ಯಮಂತ್ರಿಗಳೆ. ನವೀನ್ ಹಾಕಿದ ಪೋಸ್ಟ್ ಬಗ್ಗೆ ಮಾತನಾಡುವ ತಾವು ನವೀನ್ ಯಾಕೆ ಅಂತಹ ಕಾಮೆಂಟ್ ಹಾಕಿದ ಎಂದು ಮರೆತುಬಿಡುತ್ತೀರಿ. ಯಾಕೆ ಈ ಸೆಲೆಕ್ಟಿವ್ ಆಮ್ನಿಷಿಯ? ಎಂದು ಕೇಳಿದ್ದಾರೆ.
ಕೇವಲ ಒಬ್ಬ ವ್ಯಕ್ತಿ ಹಾಕಿದ ಕಾಮೆಂಟಿಗೆ ಊರಿಗೂರನ್ನೆ ನಾಶ ಮಾಡುವ ಮನಸ್ಥಿತಿಯ ಬಗ್ಗೆ ಮೌನವಾಗಿರುತ್ತೀರಿ. ಆದರೆ, ನಿಮ್ಮ "ಅಮಾಯಕ ಸರ್ಟಿಫಿಕೇಟ್ ಏಜೆನ್ಸಿ"ಯಿಂದ ಆರೋಪಿಗಳಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ಕೊಟ್ಟುಬಿಡುತ್ತೀರಿ. ತಪ್ಪನ್ನು ತಪ್ಪೆನ್ನುವ ಧೈರ್ಯ ಇನ್ನಾದರೂ ಬೆಳೆಸಿಕೊಳ್ಳಿ. ಎಷ್ಟು ದಿನ ಈ ಆತ್ಮ ವಂಚನೆ ಸಿದ್ದರಾಮಯ್ಯನವರೆ? ಎಂದು ಪ್ರಶ್ನಿಸಿದ್ದಾರೆ.
ಒಂದುವೇಳೆ ಪ್ರವಾದಿ ಮಹಮದ್ ಅವರ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ ನವೀನ್ನ ಶೀಘ್ರ ಬಂಧನವಾಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ. ಗಲಭೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಗಲಭೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತೇನೆ ಎಂದು ನಿನ್ನೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.