ಬೆಂಗಳೂರು, ಸೆ 03 (DaijiworldNews/PY): ಕರ್ನಾಟಕದ ಕೋವಿಡ್ ಮರಣ ಪ್ರಮಾಣ 1.64% ಮತ್ತು ಬೆಂಗಳೂರಿನ ಕೋವಿಡ್ ಮರಣ ಪ್ರಮಾಣ 1.50%ರಷ್ಟಿದ್ದು, ರಾಷ್ಟ್ರೀಯ ಮರಣ ಪ್ರಮಾಣಕ್ಕಿಂತ (1.76%) ಕಡಿಮೆಯಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಚ್.ಕೆ. ಪಾಟೀಲ್ ಅವರೆ, ತಾವು ಹಿರಿಯರಿದ್ದೀರಿ. ವಾಸ್ತವಾಂಶ ಅರಿಯದೆ ಜನರ ದಿಕ್ಕು ತಪ್ಪಿಸುವ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ. ಕರ್ನಾಟಕದ ಕೋವಿಡ್ ಮರಣ ಪ್ರಮಾಣ 1.64% ಮತ್ತು ಬೆಂಗಳೂರಿನ ಕೋವಿಡ್ ಮರಣ ಪ್ರಮಾಣ 1.50%ರಷ್ಟಿದ್ದು ರಾಷ್ಟ್ರೀಯ ಮರಣ ಪ್ರಮಾಣಕ್ಕಿಂತ (1.76%) ಕಡಿಮೆಯಿದೆ ಎಂದಿದ್ದಾರೆ.
ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ. ಜುಲೈ ತಿಂಗಳಿನಲ್ಲಿ 1.85% ರಷ್ಟಿದ್ದ ಮರಣ ಪ್ರಮಾಣ 1.50%ಕ್ಕೆ ಇಳಿಕೆಯಾಗಿದೆ. ಜುಲೈ ತಿಂಗಳಲ್ಲಿ 24% ಇದ್ದ ಪಾಸಿಟಿವಿಟಿ ದರ 14.74% ಕ್ಕೆ ಇಳಿಕೆಯಾಗಿದೆ. ಜುಲೈ ಆರಂಭದಲ್ಲಿ ಪ್ರತೀ ದಿನ ನಡೆಸುತ್ತಿದ್ದ 4,000 ಟೆಸ್ಟಿಂಗ್ ಸಂಖ್ಯೆ ಈಗ 25,000ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.