ನವದೆಹಲಿ, ಸೆ 03 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದು, ಜಿಡಿಪಿಯ ಮೇಲೆ ನೋಟು ರದ್ದತಿಯು ಋಣಾತ್ಮಕವಾದ ಪರಿಣಾಮ ಬೀರಿದೆ ಎಂದಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ನಗದು ಮುಕ್ತ ಭಾರತವು ವಾಸ್ತವಿಕವಾಗಿ ಕಾರ್ಮಿಕ, ರೈತ, ಸಣ್ಣ ಪ್ರಮಾಣದ ವ್ಯಾಪಾರಿಗಳಿಲ್ಲದ ಮುಕ್ತ ಭಾರತ. 2016ರ ನವೆಂಬರ್ 8ರಂದು ಉರುಳಿದ ದಾಳಗಳು 2020ರ ಆಗಸ್ಟ್ 31ರಂದು ಭಯಾನಕವಾದ ಫಲಿತಾಂಶ ನೀಡಿದೆ ಎಂದಿದ್ದಾರೆ.
ಜಿಡಿಪಿಯೊಂದಿಗೆ ನೋಟು ರದ್ದತಿಯು ದೇಶದ ಅಸಂಘಟಿತ ವಲಯಕ್ಕೆ ತೀವ್ರ ಅಡ್ಡಿಯುಂಟು ಮಾಡಲು ಹೇಗೆ ಕಾರಣವಾಗಿದೆ ಎಂದು ವಿಡಿಯೋದಲ್ಲಿ ನೋಡಿ ಎಂದು ತಿಳಿಸಿದ್ದಾರೆ.
ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಮಾಡಿದ ನೋಟು ರದ್ದತಿ ವಿಫಲವಾಗಿದೆ. ಇದು ದೇಶದ ಬಡ ಜನರಿಗೆ ಯಾವುದೇ ರೀತಿಯಾದ ಸಹಾಯ ಮಾಡಲಿಲ್ಲ. ನೋಟು ರದ್ದತಿ ಕ್ರಮದಿಂದ ದೇಶದ ಶ್ರೀಮಂತರಿಗೆ ಮಾತ್ರ ಪ್ರಯೋಜನವಾಯಿತು. ಇದರಿಂದ ಬಡವರಿಗೆ ಏನೂ ದೊರೆಯಲಿಲ್ಲ. ಕೆಲವು ಉದ್ಯಮಿಗಳ ಸಾಲ ಮನ್ನಾ ಮಾಡಲು ಹಣವನ್ನು ಉಪಯೋಗ ಮಾಡಲಾಯಿತು ಎಂದು ಹೇಳಿದ್ದಾರೆ.
ಅಸಂಘಟಿತ ವಲಯದಿಂದ ಎಲ್ಲಾ ಹಣವನ್ನು ತೆಗೆದು ಶ್ರೀಮಂತರ ಸಾಲ ಮನ್ನಾ ಮಾಡಲು ಬಳಸಲಾಗುತ್ತಿತ್ತು. ಇದು ನೋಟು ರದ್ದತಿಯ ಹಿಂದಿರುವ ಏಕೈಕ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಕೇಂದ್ರವು ಅಸಂಘಟಿತ ವಲಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಆಗಸ್ಟ್ 31ರಂದು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಹೇಳಿದ್ದಾರೆ.