ಕಲಬುರಗಿ, ಸೆ. 3(DaijiworldNews/HR): ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ನಾನು ಕೋವಿಡ್ -19 ಪರೀಕ್ಷೆಗೆ ಒಳಗಾಗಿದ್ದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ’ ‘ನಿಮ್ಮ ಹಾರೈಕೆ ಮತ್ತು ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ನಿಮ್ಮೆಲ್ಲರ ಸೇವೆಗೆ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರಿ ಎಂದು ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಕೋವಿಡ್ 19 ಪಾಸಿಟಿವ್ ಬಂದಿತ್ತು. ಕಲಬುರಗಿ ಪ್ರವಾಸ ಮುಗಿಸಿದ ಎರಡೇ ದಿನಕ್ಕೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿತ್ತು. ಇದೀಗ ಅವರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದ ಮಾಲೀಕಯ್ಯ ಗುತ್ತೆದಾರ್ ಅವರಿಗೂ ಸೋಂಕು ದೃಢಪಟ್ಟಿದೆ. ಹೀಗಾಗಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಮುಂಜಾಗ್ರತೆ ವಹಿಸುವಂತೆ ಮಾಲೀಕಯ್ಯ ಅವರು ಮನವಿ ಮಾಡಿದ್ದಾರೆ.