ಬೆಂಗಳೂರು, ಸೆ 03 (DaijiworldNews/PY): ಸೆಪ್ಟೆಂಬರ್ 7ರಂದು ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಆದ ನಷ್ಟದ ಬಗ್ಗೆ ಅಧ್ಯಯನ ಮಾಡಲು ರಾಜ್ಯಕ್ಕೆ ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಸೆ.7ರಂದು ಕೇಂದ್ರದ ಹಿರಿಯ ಅಧಿಕಾರಿ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ ಆರು ಮಂದಿ ಅಧಿಕಾರಿಗಳನ್ನು ಒಳಗೊಂಡ ತಂಡ ಬರಲಿದೆ ಅಲ್ಲದೇ, ಸಿಎಂ ಅವರೊಂದಿಗೆ ಚರ್ಚೆ ನಡೆಸಲಿದೆ. ಬಳಿಕ ಸೆ.8ರಂದು ಈ ತಂಡ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಿದ್ದು, ಸೆ.9ರಂದು ನಾವು ಈ ತಂಡದೊಂದಿಗೆ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದರು.
ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸುಮಾರು 95 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಈ ನಡುವೆ ನಾವು ಎನ್ಡಿಎಆರ್ಎಫ್ನ 9 ತಂಡಗಳಿಗೆ ಬೇಡಿಕೆ ಸಲ್ಲಿಕೆ ಮಾಡಿದ್ದು, ಈ ಹಿನ್ನೆಲೆ ಎನ್ಡಿಎಆರ್ಎಫ್ನ ತಂಡಗಳನ್ನು ಕಳುಹಿಸಿದ್ದು, ಆ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದರು.