ದಾವಣಗೆರೆ, ಸೆ. 3(DaijiworldNews/HR): ಈ ಹಿಂದೆ ಮಂಗಳೂರಿನಲ್ಲಿ 2009ರಲ್ಲಿ ನಡೆದ ಪಬ್ ಗಲಾಟೆ ನಡೆದ ಸಂದರ್ಭದಲ್ಲಿ ಪಬ್ ಗಳಲ್ಲಿ ಡ್ರಗ್ಸ್ ಹಾಗೂ ಇತರೆ ಮಾಫಿಯಾ ನಡೆಯುತ್ತಿದೆ ಎಂದು ಹೇಳಿದಾಗ, ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನನ್ನನ್ನು ಮಾತ್ರ ಟಾರ್ಗೆಟ್ ಮಾಡಿ 15 ದಿನ ಜೈಲಿಗೆ ಕಳಿಸಿತ್ತು ಹೊರತು ಡ್ರಗ್ಸ್ ದಂಧೆಯ ಬಗ್ಗೆ ಟಾರ್ಗೆಟ್ ಮಾಡಲೇ ಇಲ್ಲ. ಅದರ ಫಲವೇ ಈಗ ನೋಡುತ್ತಿದ್ದೆವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಪೊಲೀಸ್ ಮತ್ತು ರಾಜಕಾರಣಿಗಳೇ ರಾಜ್ಯದಲ್ಲಿ ಡ್ರಗ್ ಗೆ ನೇರ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಬೇಹುಗಾರಿಕೆ ವಿಭಾಗ ಡ್ರಗ್ಸ್ ತಡೇಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ 10 ವರ್ಷಗಳ ಕಾಲ ನಡೆಯುತ್ತಿರುವ ಡ್ರಗ್ಸ್ ಜಾಲದ ಇಂಚಿಂಚು ಮಾಹಿತಿ ಪೊಲೀಸ್ ಇಲಾಖೆ ಗೆ ಇರುತ್ತದೆ. ಆದರೆ, ರಾಜಕಾರಣಿಗಳು ಅವರ ಕೈಯನ್ನು ಕಟ್ಟಿ ಹಾಕಿರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಯುವಕ, ಯುವತಿಯರ ಬಗ್ಗೆ ಕಾಳಜಿ ಇದ್ದಲ್ಲಿ ಡ್ರಗ್ಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಬೇಹುಗಾರಿಕೆ ವಿಭಾಗಕ್ಕೆ ಡ್ರಗ್ಸ್ ಜಿಹಾದ್ ತಡೆಯಲು ಸಾಧ್ಯವಾಗದಿದ್ದರೆ ಬೇಹುಗಾರಿಕೆ ವಿಭಾಗವನ್ನು ಮುಚ್ಚಲಿ, ನಾವು ಶ್ರೀ ರಾಮ ಸೇನೆಯವರೇ ಬೀದಿಗಿಳಿದು, ಡ್ರಗ್ಸ್ ದಂಧೆಯಲ್ಲಿ ಇರುವವರನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಕೆಳಗಿಳಿಸಲು ಡ್ರಗ್ ಹಣವನ್ನು ಬಳಕೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಕುಮಾರಸ್ವಾಮಿ ಅವರನ್ನು ತನಿಖೆಗೆ ಒಳಪಡಿಸಬೇಕು. ಸರ್ಕಾರ ಬೀಳಿಸಲು ಡ್ರಗ್ ಮಾಫಿಯಾ ಹಣ ಬಳಕೆ ಮಾಡಲಾಗಿದೆ ಎಂದು ಯಾರೋ ನೀಡಿದ ಹೇಳಿಕೆಯಲ್ಲ. ಅದು ಮಾಜಿ ಮುಖ್ಯಮಂತ್ರಿ ನೀಡಿರುವಂತದ್ದು. ಹಾಗಾಗಿ ಕುಮಾರಸ್ವಾಮಿ ಅವರನ್ನು ಕರೆಸಿ, ಎಲ್ಲಿಂದ ಹಣ ಬಂತು ಮತ್ತು ಅದನ್ನು ಹೇಗೆ ಬಳಕೆ ಮಾಡಲಾಯಿತು ಎಂಬುದನ್ನು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.