ನವದೆಹಲಿ, ಸೆ. 04 (DaijiworldNews/MB) : ''ಒಬ್ಬರೇ ಕಾರು ಚಾಲನೆ, ಸೈಕ್ಲಿಂಗ್ ಮಾಡುವಾಗ ಮಾಸ್ಕ್ ಧರಿಸಬೇಕಾಗಿಲ್ಲ. ಮಾಸ್ಕ್ ಧರಿಸಿಲ್ಲ ಎಂದು ಅವರಿಗೆ ದಂಡ ವಿಧಿಸುವಂತಿಲ್ಲ'' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುವ ಸಂದರ್ಭ ಪೊಲೀಸರು ದಂಡದ ಚಲನ್ ನೀಡುವ ಅಥವಾ ದಂಡ ಪಾವತಿಸಲು ಹೇಳುವ ಕೆಲವು ನಿದರ್ಶನಗಳು ವರದಿಯಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯ ಈ ಸ್ಪಷ್ಟೀಕರಣ ನೀಡಿದ್ದಾರೆ.
ಕೊರೊನಾ ನಿರ್ವಹಣೆ ಕುರಿತ ಪ್ರತಿಕಾಗೋಷ್ಟಿ ಸಂದರ್ಭದಲ್ಲಿ ಮಾಧ್ಯಮದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ''ಒಂದು ಗುಂಪಿನಲ್ಲಿ ಇರುವಾಗ ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಬೇಕು. ಆದರೆ ಒಬ್ಬರೇ ಇರುವಾಗ ಮಾಸ್ಕ್ ಕಡ್ಡಾಯ, ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿಯಲ್ಲಿ ತಿಳಿಸಿಲ್ಲ. ವಾಹನದಲ್ಲಿ ಒಬ್ಬರೇ ಸಂಚಾರ ಮಾಡುವಾಗ ಮಾಸ್ಕ್ ಧರಿಸುಬೇಕಾಗಿಲ್ಲ'' ಎಂದು ತಿಳಿಸಿದ್ದಾರೆ.