ಬೆಂಗಳೂರು, ಸೆ.4(DaijiworldNews/HR): ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆಗಾಗಿ ಸರ್ಕಾರ ಸಿದ್ದಪಡಿಸಿರುವ ಮೀಸಲಾತಿ ಪಟ್ಟಿಯು ಸಂಪೂರ್ಣವಾಗಿ ರಾಜಕೀಯವಾಗಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜೆಡಿಎಸ್ ಹೋರಾಟ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಈ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಜೆಡಿಎಸ್ ಮುಖಂಡರು ಮತ್ತು ಜಿಲ್ಲಾ, ತಾಲೂಕು ಅಧ್ಯಕ್ಷರ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ದೇವೇಗೌಡ, ಸರ್ಕಾರ ಸಿದ್ದಪಡಿಸಿರುವ ಮೀಸಲಾತಿ ಪಟ್ಟಿ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಇನ್ನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಸಿದ್ಧತೆ ನಡೆಸುತ್ತಿದ್ದು, ಚುನಾವಣಾ ಸಮಯದಲ್ಲಿ ಪಕ್ಷವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಬೇಕೆಂದು ದೇವೇಗೌಡ ಆಗ್ರಹಿಸಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ತಮ್ಮ ಅವಶ್ಯಕತೆಗೆ ಬೇಕಾಗುವಂತೆ ಮೀಸಲಾತಿ ಪಟ್ಟಿ ಸಿದ್ದಮಾಡಿಕೊಂಡಿದೆ, ಜೆಡಿಎಸ್ ಮೇಲುಗೈ ಇರುವ ಪ್ರದೇಶಗಳಲ್ಲಿ ಮೀಸಲಾತಿ ಬದಲಾವಣೆ ಮಾಡಲಾಗಿದೆ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಆರೋಪಿಸಿದ್ದಾರೆ.