ನವದೆಹಲಿ, ಸೆ.4(DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವುದಾಗಿ ಇಮೇಲ್ ಬಂದಿದ್ದು, ಈ ಹಿನ್ನಲೆಯಲ್ಲಿ ಮೋದಿಯವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಗೆ ಈ ಇಮೇಲ್ ಬಂದಿದ್ದು, ಇದಾದ ಬಳಿಕ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಕ್ಷಣಾ ಗುಪ್ತಚರ ಇಲಾಖೆಗಳ ಹಿರಿಯ ಪ್ರತಿನಿಧಿಗಳನ್ನು ಹೊಂದಿರುವ, ಬಹು ಸಂಸ್ಥೆ ಸಮನ್ವಯ ಕೇಂದ್ರ(ಎಂಎಸಿ)ವನ್ನು ಸಂಪರ್ಕಿಸಿ ಇಮೇಲ್ ಎಲ್ಲಿಂದ ಬಂದಿರಬಹುದು ಮತ್ತು ಯಾರು ಕಳುಹಿಸಿದವರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದೆ.
ಇನ್ನು ಕಳೆದ ಆಗಸ್ಟ್ 8ರಂದು 'ylalwani12345@gmail.com' ಎಂಬ ವಿಳಾಸದಿಂದ ಈ ಮೇಲ್ ಬಂದಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತಾವೇ ತನಿಖೆ ನಡೆಸದೆ ಅದನ್ನು ಕೇಂದ್ರ ತನಿಖಾ ಗುಪ್ತಚರ ಸಂಸ್ಥೆಗೆ ವರ್ಗಾಯಿಸಿದೆ. ಪ್ರಾಥಮಿಕ ತನಿಖೆಯಿಂದ ಇದು ಭಾರತದ ಹೊರಗಿನಿಂದ ಬಂದಿರುವ ಇಮೇಲ್ ಎಂದು ತಿಳಿದುಬಂದಿದೆ.