ಲಕ್ನೋ, ಸೆ. 04 (DaijiworldNews/MB) : ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಗುರುವಾರ ಬೆಳಿಗ್ಗೆ ಮೂರು ವರ್ಷದ ಬಾಲಕಿಯೊಬ್ಬಳು ಹೊಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ ಕಳೆದ 20 ದಿನಗಳಲ್ಲಿ ನಡೆದ ಅಪ್ರಾಪ್ತ ವಯಸ್ಕರ ಅತ್ಯಾಚಾರ, ಕೊಲೆಯ ಮೂರನೇ ಘಟನೆ ಇದಾಗಿದೆ ಎಂದು ವರದಿಯಾಗಿದೆ.
ಬಾಲಕಿ ಬುಧವಾರದಿಂದ ಕಾಣೆಯಾಗಿದ್ದು ಆಕೆಯ ದೇಹವು ಮನೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಗಾಯಗಳೊಂದಿಗೆ ಗುರುವಾರ ಪತ್ತೆಯಾಗಿತ್ತು. ಗುರುವಾರ ಈ ಪ್ರಕರಣವನ್ನು ಪೊಲೀಸರು ಕೊಲೆ ಎಂದು ಹೇಳಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆಯು ಬೇರೆ ಗ್ರಾಮದ ಲೆಖ್ರಾಮ್ ಎಂಬಾತ ಹಳೆಯ ದ್ವೇಷದಿಂದಾಗಿ ತನ್ನ ಮಗಳನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದು ಆರೋಪಿಯ ಬಂಧನಕ್ಕಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸತೇಂದ್ರ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ 17 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.