ಬೆಂಗಳೂರು, ಸೆ.4(DaijiworldNews/HR): ಕರ್ನಾಟಕದ ಎಲ್ಲ ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ-ಯುಕೆಜಿ ಗಳ ಆರಂಭಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ . ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲೂ ಎಲ್ಕೆಜಿ-ಯುಕೆಜಿ ತರಗತಿ ಆರಂಭಿಸಬೇಕು ಎಂಬ ಬಗ್ಗೆ ಚರ್ಚೆ ನಡೆದು, ಒಮ್ಮತ ಮೂಡಿಬಂದಿದೆ. ಈ ಬಗ್ಗೆ ಘಟನೋತ್ತರ ಅನುಮತಿ ನೀಡಿ ಅಗತ್ಯ ಮೂಲ ಸೌಕರ್ಯ ಮತ್ತು ಸಿಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿತು ಎಂದು ತಿಳಿಸಿದ್ದಾರೆ.
ಇನ್ನು ಜಲ ಸಮೃದ್ಧಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಜಲಾನಯನ ಅಭಿವೃದ್ಧಿ ಯೋಜನೆಯಡಿ ವಿಶ್ವಬ್ಯಾಂಕ್ ನೆರವಿನೊಂದಿಗೆ 600 ಕೋಟಿ ರೂ. ವೆಚ್ಚದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲ ಸಮೃದ್ಧಿ ಕಾರ್ಯಕ್ರಮಕ್ಕೆ ಸಂಪುಟ ಅನುಮೋದನೆ ನೀಡಿತು. ರಾಜ್ಯ ಕೃಷಿ ಬೆಲೆ ಆಯೋಗದ ಅವಧಿಯನ್ನು 2023ರ ವರೆಗೆ ವಿಸ್ತರಿಸಲು ಸಂಪುಟ ಒಪ್ಪಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಅನುಷ್ಠಾನ ಸಂಬಂಧ ಕ್ಲಸ್ಟರ್ವಾರು ವಿಮಾ ಕಂಪೆನಿಗಳ ನಿಗದಿಗೆ ಅನುಮೋದನೆ ನೀಡಲಾಗಿದೆ ಎಂದರು.
ಡಿಜಿಟಲ್ ಲರ್ನಿಂಗ್ ಯೋಜನೆ ಬಗ್ಗೆ ತಿಳಿಸಿದ ಅವರು, 2020-21ನೇ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು , ಸರಕಾರಿ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಲರ್ನಿಂಗ್ ಯೋಜನೆಯನ್ನು ಈ ವರ್ಷದಿಂದ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. 430 ಪ್ರ. ದರ್ಜೆ ಕಾಲೇಜು, 87 ಸರಕಾರಿ ಪಾಲಿಟೆಕ್ನಿಕ್ ಮತ್ತು 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 35 ಕೋ.ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.