ಬೆಂಗಳೂರು, ಸೆ.4(DaijiworldNews/HR): ಡ್ರಗ್ಸ್ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕೋವರೆಗೂ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ , ಡ್ರಗ್ಸ್ ಜಾಲದ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಪ್ರಗತಿ ಕಾಣುತ್ತಿದ್ದು, ತನಿಖೆಯಲ್ಲಿ ಹೊಸ ಆಯಾಮಗಳು ಸಿಗುತ್ತಿವೆ. ಇನ್ನು ಡ್ರಗ್ಸ್ ಎಲ್ಲಿಂದ ಹೇಗೆ ಪೂರೈಕೆ ಆಗುತ್ತಿತ್ತು ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಎರಡನೆ ಹಂತದ ನಗರಗಳಲ್ಲಿಯೂ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಅಲ್ಲಿಯೂ ನಿಯಂತ್ರಣ ಹೇರುವ ನಿಟ್ಟಿನಲ್ಲಿ ನಾಳೆ ಜಿಲ್ಲೆಗಳ ಎಸ್ಪಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು. ಎಲ್ಲ ಕಡೆಗಳಲ್ಲೂ ಕಾರ್ಯಾಚರಣೆ ಮುಂದುವರೆಸುತ್ತೇವೆ. ಚಿತ್ರನಟಿ ರಾಗಿಣಿ ನಿವಾಸದ ಮೇಲಿನ ದಾಳಿ ಸಿಸಿಬಿ ತನಿಖೆಯ ಒಂದು ಭಾಗವಾಗಿದೆ. ಕಾನೂನು ಪ್ರಕಾರ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಿಸಿಬಿ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.