ಹೈದರಾಬಾದ್, ಸೆ.4(DaijiworldNews/HR): ಜಮ್ಮು ಮತ್ತು ಕಾಶ್ಮೀರದ ಯುವಕರು ಭಯೋತ್ಪಾದನೆಗೆ ಸೇರದಂತೆ ತಡೆಯಲು, ಅಲ್ಲಿನ ತಾಯಂದಿರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಮಹಿಳಾ ಪೊಲೀಸ್ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ನಡೆದ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಜಮ್ಮು-ಕಾಶ್ಮೀರದ ಜನರ ಮನಸ್ಸು ಬಹಳ ಸುಂದರವಾಗಿದ್ದು, ಅಲ್ಲಿನ ಜನರೊಂದಿಗೆ ನಾನು ನಿಕಟ ಸಂಪರ್ಕ ಹೊಂದಿದ್ದೇನೆ. ಅವರು ಎಲ್ಲರನ್ನು ಸಮಾನರಂತೆ ಪ್ರೀತಿಯಿಂದ ಕಾಣುತ್ತಾರೆ. ಹಾಗಾಗಿ, ಅಲ್ಲಿ ತಪ್ಪು ದಾರಿ ಹಿಡಿಯುವವರನ್ನು ನಾವು ತಡೆಯಬೇಕು ಎಂದರು.
ತಪ್ಪು ದಾರಿ ಹಿಡಿಯುವವರನ್ನು ಸರಿದಾರಿಗೆ ತರುವ ಕೆಲಸ ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಸಾಧ್ಯ. ಯುವಕರು ಭಯೋತ್ಪಾದನೆಯತ್ತ ಸಾಗುವುದನ್ನು ತಾಯಂದಿರ ನೆರವಿನಿಂದ ತಡೆಯಬಹುದು. ಈ ಮೂಲಕ ಆರಂಭಿಕ ಹಂತದಲ್ಲೇ ಭಯೋತ್ಪಾದನೆಯನ್ನು ತಡೆಯಬಹುದು ಎಂದು ಮೋದಿ ತಿಳಿಸಿದ್ದಾರೆ.