ಬೆಂಗಳೂರು, ಸೆ 04 (DaijiworldNews/PY): ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಬಿಡುಗಡೆಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಜ್ವರ ಮರುಕಳಿಸಿದಂತಾಗಿದ್ದು, ಜಯನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಜ್ವರ ಬಂದ ನಂತರ ಪುನಃ ಜಯನಗರದಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವುದಾಗಿ ಡಿಕೆಶಿ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಆಗಸ್ಟ್ 24ರಂದು ಡಿ.ಕೆ.ಶಿವಕುಮಾರ್ ಅವರಿಗೆ ಕೊರೊನಾ ದೃಢಪಟ್ಟ ಕಾರಣ ಅವರು ರಾಜಾಜಿ ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಬಳಿಕ ಈ ವಾರದ ಆರಂಭದಲ್ಲಿ ಕೊರೊನಾ ಪರೀಕ್ಷೆ ಸಂದರ್ಭ ನೆಗೆಟಿವ್ ಬಂದಿದ್ದ ಕಾರಣ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.