ನವದೆಹಲಿ, ಸೆ.4(DaijiworldNews/HR): ಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿಯನ್ನು ನೀಡುತ್ತಿದ್ದ ಆರೋಪದ ಮೇರೆಗೆ ಡಾಕ್ಟರ್ ಹಾಗೂ ಆತನ ಆಪ್ತ ಸಹಾಯಕನನ್ನು ಬಂಧಿಸಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಮಾಳ್ವವಿಯಾ ನಗರದ ನಿವಾಸಿ ಡಾ. ಕುಶ್ ಬಿಹಾರಿ ಪರಶರ್ ಹಾಗೂ ಆತನ ಸಹಾಯಕ ಅಮಿತ್ ಸಿಂಗ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಕೊರೊನಾ ಪರೀಕ್ಷೆ ವರದಿ ಸಂಬಂಧ ಮಾನ್ಯತೆ ಪಡೆದ ಪರೀಕ್ಷಾ ಪ್ರಯೋಗಾಲಯ ದಾಖಲಿಸಿದ ದೂರಿನ ಆಧಾರದ ಮೇಲೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉದ್ಯಮಿಯೊಬ್ಬರು ಆಗಸ್ಟ್ 30 ರಂದು ತನ್ನಿಬ್ಬರು ಸಿಬ್ಬಂದಿಗಳ ಕೊರೊನಾ ಪರೀಕ್ಷೆ ವರದಿ ನೀಡುವಂತೆ ಡಾಕ್ಟರ್ ಪರಶರ್ ಅವರನ್ನು ಕೇಳಿದ್ದಾರೆ. ನಕಲಿ ವರದಿಯನ್ನು ಪರಶರ್ ಉದ್ಯಮಿಗೆ ಕಳುಹಿಸಿದ್ದಾರೆ. ಪರೀಕ್ಷಾ ವರದಿಯ ಹೆಸರಿನಲ್ಲಿ ತಪ್ಪೊಂದು ಕಂಡುಬಂದಿದ್ದು, ಆದನ್ನು ಸರಿಪಡಿಸಿ ಹೊಸ ವರದಿ ನೀಡುವಂತೆ ಗ್ರಾಹಕ ಡಯಾಗ್ನೊಸ್ಟಿಕ್ ಸೆಂಟರ್ ಸಂಪರ್ಕಿಸಿದ್ದಾಗ ಅದು ನಕಲಿ ವರದಿ ಎಂಬುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನ್ಯತಾ ಪಡೆದ ಪ್ರಯೋಗಾಲಯಗಳ ಹೆಸರನ್ನು ಬಳಸಿ 75 ಕ್ಕೂ ಹೆಚ್ಚು ರೋಗಿಗಳಿಗೆ ನಕಲಿ ಕೋವಿಡ್-19 ಪರೀಕ್ಷಾ ವರದಿ ನೀಡಿರುವುದಾಗಿ ಪರಶರ್ ತಪ್ಪೊಪ್ಪಿಕೊಂಡಿದ್ದಾನೆ.