ಗೌರಿಬಿದನೂರು, ಸೆ 04 (DaijiworldNews/PY): ಸಮಾಜದಲ್ಲಿ ಜನಪ್ರತಿನಿಧಿಗಳು ಹಾಗೂ ನಟ-ನಟಿಯರು ರಾಯಭಾರಿಗಳಂತೆ ಇರಬೇಕು. ಅವರೇ ದುಶ್ಚಟಗಳನ್ನು ಬೆಳೆಸಿಕೊಂಡರೆ, ಅವರ ಹೆಸರು ಹಾಳಾಗುವುದಲ್ಲದೇ, ಇವರನ್ನು ಹಿಂಬಾಲಿಸುವವರ ಹಾದಿ ಕೂಡಾ ತಪ್ಪುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ಗೌರಿಬಿದನೂರು ಮಿನಿವಿಧಾನಸೌಧದ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಜನರು ನಮ್ಮನ್ನು ನೋಡಿ ಬದಲಾಗುತ್ತಾರೆ. ಆದರೆ, ನಾವೇ ದುಶ್ಚಟಗಳ ದಾಸರಾದರೆ ಅವರ ಹಾದಿ ಕೂಡಾ ತಪ್ಪಿದಂತಾಗುತ್ತದೆ. ಹಾಗಾಗಿ ಉತ್ತಮ ನಡವಳಿಕೆ ಹೊಂದಿರಬೇಕು ಎಂದಿದ್ದಾರೆ.
ಡ್ರಗ್ಸ್ ಸೇವೆನೆ ಮಾಡುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಡ್ರಗ್ಸ್ ಮಾಫಿಯಾದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಗೃಹ ಸಚಿವರಲ್ಲಿ ಮಾತನಾಡಿದ್ದೇನೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.