ಬೆಂಗಳೂರು, ಸೆ. 05 (DaijiworldNews/MB) : ಕೇಂದ್ರ ಸರಕಾರವು ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಹುನ್ನಾರ ನಡೆಸುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆರೋಪಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹುತಾತ್ಮರಾಗಿ ಮೂರು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ ಆನ್ಲೈನ್ನಲ್ಲಿ ಆಯೋಜಿಸಿದ್ದ ಗೌರಿ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಕೇಂದ್ರ ಸರ್ಕಾರವು ಒಂದೇ ಭಾಷೆ ಒಂದೇ ಆಡಳಿತ ಜಾರಿಗೆ ತರುವಲ್ಲಿ ಕಾರ್ಯ ನಿರತವಾಗಿದ್ದು ಇದೇ ಮುಂದುವರೆದು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವ ಹುನ್ನಾರ ನಡೆಸುತ್ತಿದೆ'' ಎಂದು ದೂರಿದರು.
''ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಂತ್ರಿಗಳು ಆಡಳಿತ ನಡೆಸುತ್ತಿಲ್ಲ. ಬದಲಾಗಿ ಪಟ್ಟಭದ್ರ ಹಿತಾಸಕ್ತಿಗಳ ಸೂಚನೆಗೆ ತಕ್ಕುದಾಗಿ ನಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ದೇಶದಲ್ಲಿ ವಿಸ್ತಾರವಾಗಿರುವ ಗೌರಿ ಬಳಗ ಒಂದು ವೇದಿಕೆಗೆ ಬಂದು ಒಟ್ಟಾಗಿ ದೇಶದ ಪ್ರಜಾಪ್ರಭುತ್ವ, ಸಾರ್ವಭೌಮತೆ ಹಾಗೂ ರಾಜ್ಯಾಂಗವನ್ನು ರಕ್ಷಿಸಬೇಕಿದೆ'' ಎಂದು ಹೇಳಿದರು.