ನವದೆಹಲಿ, ಸೆ. 05 (DaijiworldNews/MB) : ''ಮನಸ್ಸುಗಳ ರೂಪಿಸಲು, ದೇಶದ ಅಭಿವೃದ್ದಿಗಾಗಿ ಶ್ರಮಿಸುವ ಶಿಕ್ಷಕರಿಗೆ ಕೃತಜ್ಞ'' ಎಂದು ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಕರ ದಿನವಾದ ಶನಿವಾರ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಮನಸ್ಸುಗಳ ರೂಪಿಸಲು ಮತ್ತು ನಮ್ಮ ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಶಿಕ್ಷಕರಿಗೆ ಅವರು ನೀಡುವ ಕೊಡುಗೆಗಳಿಗಾಗಿ ನಾವು ಕೃತಜ್ಞರಾಗಿರುತ್ತೇವೆ. ಶಿಕ್ಷಕರ ದಿನದಂದು ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಡಾ.ಎಸ್.ರಾಧಾಕೃಷ್ಣನ್ ಅವರ ಜಯಂತಿಯಂದು ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ'' ಎಂದು ಹೇಳಿದ್ದಾರೆ. ಹಾಗೆಯೇ ''ಇತ್ತೀಚಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶಿಕ್ಷಕರು ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟದ ಹೆಚ್ಚು ಜನಜನಿತವಲ್ಲದ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುವ ಕಲ್ಪನೆಯನ್ನು ನಾನು ಹಂಚಿಕೊಂಡಿದ್ದೇನೆ'' ಎಂದು ಕೂಡಾ ತಿಳಿಸಿದ್ದಾರೆ.
ಇನ್ನು ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು, ''ನಾಡಿನ ಎಲ್ಲ ಶಿಕ್ಷಕರಿಗೆ 'ಶಿಕ್ಷಕರ ದಿನ'ದ ಹಾರ್ದಿಕ ಶುಭಾಶಯಗಳು. ಮಾಜಿ ರಾಷ್ಟ್ರಪತಿ ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೆ ನಮಿಸುತ್ತಾ, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ, ಶಿಕ್ಷಣದ ಮೂಲಕ ಭವಿಷ್ಯದ ಸಶಕ್ತ ಪ್ರಜೆಗಳನ್ನು ರೂಪಿಸುವ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತಿರುವ ಎಲ್ಲ ನಮ್ಮ ಶಿಕ್ಷಕರಿಗೆ ಗೌರವಪೂರ್ವಕ ಅಭಿನಂದನೆಗಳು'' ಎಂದು ಹೇಳಿದ್ದಾರೆ.
''ಕಲಿಯಲು ಸಿದ್ಧರಿರುವವರಿಗೆ ಇಡೀ ವಿಶ್ವವೇ ಶಿಕ್ಷಕ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ್ದಾರೆ.